ಸ್ಮಾರಕ, ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿ

| Published : Sep 20 2024, 01:41 AM IST

ಸಾರಾಂಶ

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಚರಣೆಯ ಪೂರ್ವಭಾವಿ ಸಭೆ ನಡೆಯಿತು.

ಅ.1ವರೆಗೆ ಸ್ವಚ್ಚತಾ ಹೀ ಸೇವಾ ಅಭಿಯಾನ । ಪಾಕ್ಷಿಕ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಡಿಸಿ ಸೂಚನೆ

ಕನ್ನಡಪ್ರಭ ವಾರ್ತೆ ದಾವಣಗೆರೆ ಸ್ವಚ್ಚತಾ ಹೀ ಸೇವಾ ಅಭಿಯಾನವನ್ನು ಅ.01 ವರೆಗೆ ‘ಸ್ವಭಾವ್ ಸ್ವಚ್ಛತಾ ಸಂಸ್ಕಾರ್’ ಎಂಬ ಧ್ಯೆಯದೊಂದಿಗೆ ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯು ಸೇರಿದಂತೆ ಸ್ಮಾರಕಗಳು, ಸಾಂಸ್ಕೃತಿಕ ಭವನ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ದಾಖಲೀಕರಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಅಭಿಯಾನವನ್ನು ಸಾರ್ವಜನಿಕರು ಭಾಗವಹಿಸುವಿಕೆಯೊಂದಿಗೆ ನೈರ್ಮಲ್ಯ ಧಾರಣೆಗೆ ಪ್ರಾಶಸ್ತ್ಯ ನೀಡುವ ಮೂಲಕ ಎಲ್ಲಾ ನಾಗರಿಕರು ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಸ್ವಚ್ಛತೆ, ನೈರ್ಮಲ್ಯ ಸಾಧಿಸಲು ಅನುಕೂಲವಾಗುವ ಚಟುವಟಿಕೆಗಳನ್ನು ಕೇಂದ್ರೀಕರಿಸಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ನಡೆಸಲಾಗುತ್ತಿದೆ. ಆದ್ದರಿಂದ ಸ್ವಚ್ಛತಾ ಹೀ ಸೇವಾ ಆಂದೋಲನದ ಭಾಗವಾಗಿ ಪ್ರತಿ ತಾಲೂಕು, ನಗರಸಭೆ, ಪುರಸಭೆ, ಪ್ರತಿ ಗ್ರಾಪಂ, ಪ್ರತಿ ಗ್ರಾಮಗಳಲ್ಲಿ, ಸರ್ಕಾರದ ಎಲ್ಲಾ ಇಲಾಖೆಗಳು ಸಂಬಂಧಪಟ್ಟ ಎಲ್ಲಾ ಕಚೇರಿಗಳನ್ನು ಸ್ವಚ್ಛತೆ ಮಾಡುವ ಮೂಲಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಆಂದೋಲನದಲ್ಲಿ ಸ್ವಯಂ ಸೇವಕರು, ಎನ್‌ಜಿಒ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಬೇಕು. ಆಂದೋಲನಕ್ಕೆ ಸಂಬಂಧಿಸಿದಂತೆ ಎಲ್ಲ ಶಾಲಾ, ಕಾಲೇಜಿನಲ್ಲಿ ಜಾಥಾ, ಪ್ರತಿಜ್ಞಾ ವಿಧಿ ಬೋಧನೆ ಮಾಡಿಸಿ ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಳ್ಳುವಂತೆ ಮಾಡಬೇಕು. ಕಡ್ಡಾಯವಾಗಿ ಸ್ವಚ್ಛತಾ ಆಂದೋಲನದ ಬಗ್ಗೆ ಪ್ರಬಂಧ, ಚರ್ಚಾ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಬೇಕು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅವರ ತಂದೆ, ತಾಯಿ ಹಾಗೂ ಪೋಷಕರಿಗೆ ಸ್ವಚ್ಛತೆಯ ಪ್ರಾಮುಖ್ಯತೆ ಬಗ್ಗೆ ಪತ್ರ ಬರೆಸಿ ಪತ್ರ ಅಭಿಯಾನ ಆಯೋಜಿಸುವಂತೆ ತಿಳಿಸಿದರು.

ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತಾ ಹೀ ಸೇವಾ ವೆಬ್‌ಸೈಟ್ https://swachhatahiseva.com/ ಲಿಂಕ್‌ನಲ್ಲಿ ಕಡ್ಡಾಯವಾಗಿ ಪೋಟೋಗಳನ್ನು ನಮೂದಿಸುವ ಮೂಲಕ ಸ್ವಚ್ಛತಾ ಹೀ ಸೇವಾ ಆಂದೋಲನವನ್ನು ಯಶಸ್ವಿಗೊಳಿಸಬೇಕೆಂದು ಎಂದು ತಿಳಿಸಿದ್ದಾರೆ.

ಸ್ವಚ್ಛತೆ ಮಾಡಬೇಕಿರುವ ಹೆಚ್ಚು ಅನೈರ್ಮಲ್ಯ ಹೊಂದಿರುವ ಸ್ಥಳಗಳು, ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ಈ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸುವಂತೆ ತಿಳಿಸಿ. ಆಂದೋಲನದ ಅವಧಿಯಲ್ಲಿ ಇಲಾಖಾವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಸ್ವಚ್ಛ ಪ್ರವಾಸೋದ್ಯಮ ಪರಿಕಲ್ಪನೆ, ಪ್ರವಾಸಿ ತಾಣಗಳಲ್ಲಿನ ಶೌಚಗೃಹದಲ್ಲಿ ಶುಚಿತ್ವ ಮತ್ತು ನೈರ್ಮಲ್ಯದ ನಿರ್ವಹಣೆ ಮಾಡುವುದು ಕಡ್ಡಾಯ, ಸಾರಿಗೆ ಇಲಾಖೆಯವರು ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರೊಂದಿಗೆ ಶುಚಿತ್ವದ ಮಹತ್ವ ಸಾರುವಂತೆ ನಿಲ್ದಾಣಗಳಲ್ಲಿ ಕಸದ ತೊಟ್ಟಿ ಬುಟ್ಟಿಗಳನ್ನು ಇಡುವುದು. ಕಸ ವಿಲೇವಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ಮಹಾಂತೇಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.