- ಶ್ರೀ ಕರಿಬಸವೇಶ್ವರ ಸ್ವಾಮಿ ಜಾತ್ರೆ । ವೃಷಭಪುರಿ ಮಠ ಶ್ರೀಗಳಿಂದ ನಂದಿ ಧ್ವಜಾರೋಹಣ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಸಮಾಜದ ಎಲ್ಲ ವರ್ಗಗಳ ಭಕ್ತರು ತಮ್ಮ ಕಷ್ಟ, ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಉಕ್ಕಡಗಾತ್ರಿ ಅಜ್ಜಯ್ಯನ ಕ್ಷೇತ್ರಕ್ಕೆ ಭಕ್ತಿಯಿಂಂದ ಆಗಮಿಸಿ ನೆಮ್ಮದಿಯಿಂದ ತೆರಳುತ್ತಿದ್ದಾರೆ ಎಂದು ನಂದಿಗುಡಿ ವೃಷಭಪುರಿ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ನುಡಿದರು.ಇಲ್ಲಿಗೆ ಸಮೀಪದ ಉಕ್ಕಡಗಾತ್ರಿ ಕ್ಷೇತ್ರದ ಶ್ರೀ ಕರಿಬಸವೇಶ್ವರ ಸ್ವಾಮಿ ಜಾತ್ರೆ ಹಿನ್ನೆಲೆ ನಂದಿ ಧ್ವಜಾರೋಹಣ ಮೂಲಕ ಉತ್ಸವಕ್ಕೆ ಚಾಲನೆ ನೀಡಿ ಅವರು ಸಂದೇಶ ನೀಡಿದರು. ಸಾಗರೋಪಾದಿಯಲ್ಲಿ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದಾರೆ. ಭಕ್ತರು ವಸತಿ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಸಹಕಾರ ನೀಡಬೇಕು. ಆಗ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ. ಭಕ್ತರಿಗೆ ಅಗತ್ಯ ಸೌಲಭ್ಯಗಳ ಕೊರತೆ ಇದ್ದಲ್ಲಿ ಸಲಹೆ ನೀಡಬಹುದು ಎಂದರು.
ಶ್ರೀ ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಕಾರ್ಯದರ್ಶಿ ಎಸ್ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಜ್ಜಯ್ಯನ ಕ್ಷೇತ್ರಗಳು ಜಿಲ್ಲೆಗೊಂದು ನಿರ್ಮಾಣ ಮಾಡಿ ಮೂಢನಂಬಿಕೆ ಬಿತ್ತುವ ಮತ್ತು ಚಂದಾ ವಸೂಲಿ ಮಾಡುವವರ ಬಗ್ಗೆ ಎಚ್ಚರವಾಗಿರಬೇಕು. ಯಾವುದೇ ಭಾಗದಲ್ಲೂ ದೇವಾಯಲದಿಂದ ಪ್ರತಿನಿಧಿಗಳ ನೇಮಕ ಮಾಡಿಲ್ಲ. ಹೀಗೆ ಹೇಳಿಕೊಳ್ಳುವಂಥ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಮನವಿ ಮಾಡಿದರು.
ಉಕ್ಕಡಗಾತ್ರಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಕಾಣಿಕೆಯಲ್ಲಿ ವಸತಿ ಸೌಲಭ್ಯ, ಶುದ್ಧ ನೀರು, ಶೌಚಾಲಯ, ವಿಶ್ರಾಂತಿ ಗೃಹಗಳು, ಬೆಳ್ಳಿರಥ, ಚಿನ್ನದ ಕಿರೀಟ, ಬೆಳ್ಳಿ ಉತ್ಸವ ಮೂರ್ತಿ, ಪ್ರಸಾದವನ್ನು ನೀಡಲಾಗಿದೆ. ದಾಸೋಹ ಮಂದಿರ ಮತ್ತು ರಾಜಗೋಪುರದ ಕಾಮಗಾರಿ ಭರದಿಂದ ಸಾಗಿದೆ ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ವಿವೇಕಾನಂದ ಪಾಟೀಲ್, ನಾಗರಾಜ್ ದಿಲ್ಲಿವಾಲ, ಬಸವನಗೌಡ ಪಾಳ್ಯದ, ಪ್ರಕಾಶ ಕೋಟೇರ, ಗದಿಗೆಪ್ಪ ಹೊಸಳ್ಳಿ, ಮಹಂತೇಶ್ ಚೊಗಚಿಕೊಪ್ಪ, ಸಿದ್ದನಗೌಡ, ಎಎಸ್‌ಐ ಶ್ರೀನಿವಾಸ್ ಮತ್ತಿತರರು ಮಾತನಾಡಿದರು.ವೃತ್ತ ನಿರೀಕ್ಷಕ ಸುರೇಶ್ ಸಗರಿ ನೇತೃತ್ವದಲ್ಲಿ ೯ ಪಿಎಸ್‌ಐಗಳು, ೨೦೦ ಪೋಲಿಸರು, ೫೦ ಗೃಹರಕ್ಷಕದಳ, ೨ ಮೀಸಲು ತುಕಡಿಯನ್ನು ಬಂದೋಬಸ್ತ್ ನಿಯೋಜಿಸಲಾಗಿದೆ. ಬುಧವಾರ ಕರಿಬಸವೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಧಾವಿಸುತ್ತಿದ್ದಾರೆ. ಕೆಲ ಭಕ್ತರು ಪಾದಯಾತ್ರೆ ಮೂಲಕವೂ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
- - --ಚಿತ್ರ೨: ಉಕ್ಕಡಗಾತ್ರಿಯಲ್ಲಿ ಕರಿಬಸವೇಶ್ವರ ಜಾತ್ರೆ ಹಿನ್ನೆಲೆ ನಂದಿಗುಡಿ ವೃಷಭಪುರಿ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ನಂದಿ ಧ್ವಜಾರೋಹಣ ನೆರವೇರಿಸಿದರು.-ಚಿತ್ರ೩: ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಕ್ಷೇತ್ರದ ಶ್ರೀ ಕರಿಬಸವೇಶ್ವರ ಸ್ವಾಮಿ ರಥೋತ್ಸವ ಬುಧವಾರ ನಡೆಯಲಿರುವ ಹಿನ್ನೆಲೆ ಮಂಗಳವಾರ ಬೆಳಗ್ಗೆ ರಥದ ಬ್ರೇಕ್, ಗಾಲಿಗಳ ವ್ಯವಸ್ಥೆ ಪರಿಶೀಲನೆ ನಡೆಯಿತು.