ಕನ್ನಡಪ್ರಭ ವಾರ್ತೆ ಬೆಳಗಾವಿಸಾರ್ವಜನಿಕರ ಹಿತ ಕಾಪಾಡುವುದರ ಜತೆಗೆ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ಅವಕಾಶ ಕಲ್ಪಿಸುವುದು ಅಗತ್ಯ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ನಿಯಮಗಳನ್ನು ಪಾಲಿಸಿ ಮಹಾನಗರ ಪಾಲಿಕೆಯೊಂದಿಗೆ ಸಹಕಾರದಿಂದ ನಡೆದುಕೊಳ್ಳುವ ಮೂಲಕ ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಮೇಯರ್ ಪ್ರೀತಿ ಕಾಮಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಾರ್ವಜನಿಕರ ಹಿತ ಕಾಪಾಡುವುದರ ಜತೆಗೆ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ಅವಕಾಶ ಕಲ್ಪಿಸುವುದು ಅಗತ್ಯ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ನಿಯಮಗಳನ್ನು ಪಾಲಿಸಿ ಮಹಾನಗರ ಪಾಲಿಕೆಯೊಂದಿಗೆ ಸಹಕಾರದಿಂದ ನಡೆದುಕೊಳ್ಳುವ ಮೂಲಕ ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಮೇಯರ್ ಪ್ರೀತಿ ಕಾಮಕರ್ ಹೇಳಿದರು.

ಮಂಗಳವಾರ ಮಹಾನಗರ ಪಾಲಿಕೆಯಲ್ಲಿ ನಡೆದ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಸಂಚಾರಕ್ಕೆ ಮುಕ್ತವಾಗಿಡುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಹೀಗಾಗಿ ನಿಯಮಗಳನ್ನು ಪಾಲಿಸುವುದರ ಜತೆಗೆ ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿಯನ್ನೂ ಕಾಪಾಡಬೇಕಿದೆ. ನಗರ ಸೇವಕರು, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ವ್ಯಾಪಾರಿಗಳು ಸಹಕಾರದಿಂದ ನಡೆದುಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪಮೇಯರ್ ಹನುಮಂತ ಕೊಂಗಾಲಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ನಿಯಮಗಳನ್ನು ಪಾಲಿಸಿ ಪಾಲಿಕೆಗೆ ಸಹಕಾರ ನೀಡಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಮಹಾನಗರ ಪಾಲಿಕೆಯಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ. ಇದಕ್ಕೆ ಎಲ್ಲರ ಅಗತ್ಯ ಸಹಕಾರ ಬೇಕು. ಇದಕ್ಕೆ ಬೇಕಾದ ಪಾಲಿಕೆಯಿಂದಲೂ ತಮಗೆ ಸಹಕಾರ ದೊರೆಯಲಿದೆ ಎಂದರು.

ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮಾತನಾಡಿ, ವ್ಯಾಪಾರಕ್ಕೆ ಸೂಕ್ತ ಸ್ಥಳಗಳನ್ನು ಪರಿಶೀಲಿಸಿ, ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಯಾರಿಗೂ ತಾರತಮ್ಯ ಮಾಡದೇ ಒಟ್ಟಾಗಿ ತೆಗೆದುಕೊಂಡು ಹೋಗಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಪಟ್ಟಣ ಮಾರಾಟ ಸಮಿತಿ ಸದಸ್ಯರು ಬೀದಿ ಬದಿ ವ್ಯಾಪಾರಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಮೈಲುಗೋಳ, ರಾಜು ಭಾತಕಾಂಡೆ, ಶ್ರೇಯಸ್ ನಾಕಾಡಿ, ನಗರ ಸೇವಕರಾದ ಸವಿತಾ ಕಾಂಬಳೆ, ಗಿರೀಶ ಧೋಂಗಡಿ, ಪಾಲಿಕೆ ಅಭಿವೃದ್ಧಿ ವಿಭಾಗದ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್, ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಟಿ.ಬಿ., ನಗರ ಯೋಜನಾಧಿಕಾರಿ ವಾಹಿದ್ ಅಖ್ತರ್, ಅಭಿಯಂತರ ಅನೂಪ, ಸಿಎಒ ಗೀತಾ, ಪಟ್ಟಣ ಮಾರಾಟ ಸಮಿತಿ ಪದಾಧಿಕಾರಿಗಳಾದ ಶ್ರೀಪಾದ್ ಹೋಳ್ಕರ್, ಮೊಹಮ್ಮದ್ ಅಲಿ ಭಾಗವಾನ್, ವಿಜಯ ಚೌಹಾನ್, ಚಂದ್ರವ್ವ ದೇಸೂರಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.-------------

ಕೋಟ್‌....

ನಿಯಮಗಳನ್ನು ಪಾಲಿಸುವುದರ ಜತೆಗೆ ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿಯನ್ನೂ ಕಾಪಾಡಬೇಕಿದೆ. ನಗರ ಸೇವಕರು, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ವ್ಯಾಪಾರಿಗಳು ಸಹಕಾರದಿಂದ ನಡೆದುಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು.

- ಪ್ರೀತಿ ಕಾಮಕರ್, ಮೇಯರ್‌