ಮತ ಎಣಿಕೆ ಪ್ರಕ್ರಿಯೆಗೆ ತೊಂದರೆಯಾಗದಂತೆ ಶಿಸ್ತು ಪಾಲಿಸಿ: ನಲಿನ್ ಅತುಲ್

| Published : Jun 01 2024, 12:45 AM IST / Updated: Jun 01 2024, 12:46 AM IST

ಸಾರಾಂಶ

ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯ ಜೂ. 4ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಾಗೂ ಚುನಾವಣಾ ಏಜೆಂಟರಿಗೆ ಮತ ಎಣಿಕಾ ಕಾರ್ಯದ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಮಾಹಿತಿ ನೀಡಿದರು.

ಕೊಪ್ಪಳ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಮತ ಎಣಿಕೆ ಕಾರ್ಯ ಜೂ. 4ರಂದು ನಡೆಯಲಿದ್ದು, ಅಂದು ಮತ ಎಣಿಕೆ ಕೇಂದ್ರದಲ್ಲಿ ಹಾಜರಿರುವ ಚುನಾವಣಾ ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರು ಮತ ಎಣಿಕೆ ಪ್ರಕ್ರಿಯೆ ಹಾಗೂ ಮತ ಎಣಿಕೆ ಸಿಬ್ಬಂದಿಗೆ ತೊಂದರೆಯಾಗದಂತೆ ಶಿಸ್ತು ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಾಗೂ ಚುನಾವಣಾ ಏಜೆಂಟರಿಗೆ ಮತ ಎಣಿಕಾ ಕಾರ್ಯದ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೂ. 4ರಂದು ನಗರದ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಳಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ತೆರೆಯಲಾಗುತ್ತದೆ. 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳನ್ನು ನಿಗದಿಪಡಿಸಲಾಗಿದೆ. ಆಯಾ ಕ್ಷೇತ್ರದ ಮತದಾರರ ಸಂಖ್ಯೆಗೆ ಅನುಗುಣವಾಗಿ ಮತ ಎಣಿಕೆ ಸುತ್ತುಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಮಗೆ ಅವಶ್ಯಕ ಮತ್ತು ಅನಿವಾರ್ಯ ಎನಿಸುವ ಎಣಿಕೆ ಏಜೆಂಟರನ್ನು ನೇಮಕ ಮಾಡಬಹುದು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ನಗರಸಭೆ ಸದಸ್ಯರು ಕೌಂಟಿಂಗ್ ಏಜೆಂಟರಾಗಬಹುದು. ಕೌಂಟಿಂಗ್ ಏಜೆಂಟರು ಇದೇ ಕ್ಷೇತ್ರದ ಸಾಮಾನ್ಯ ರಹವಾಸಿಯಾಗಿರಬೇಕು. ಪ್ರತಿ ಸುತ್ತಿನ ಕೊನೆಗೆ ಪ್ರತಿ ಅಭ್ಯರ್ಥಿ ಪಡೆದ ಮತಗಳ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.

ಕೌಂಟಿಂಗ್ ಏಜೆಂಟರ ನೇಮಕಾತಿಗಾಗಿ ನಮೂನೆ-18ರಲ್ಲಿ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕು. ಗುರುತಿನ ಚೀಟಿ, ಪಾಸ್ ಹೊಂದಿರದ ಯಾವುದೇ ವ್ಯಕ್ತಿಗೆ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಮಾಡಲು ಅವಕಾಶವಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಪ್ರತ್ಯೇಕ ಬಣ್ಣದ ಪಾಸ್ ನೀಡಲಾಗುತ್ತದೆ. ಏಜೆಂಟರು ತಮಗೆ ನಿಗದಿಪಡಿಸಿದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗದಿಪಡಿಸಿರುವ ಕೌಂಟಿಂಗ್‌ ಕೊಠಡಿ ಬಿಟ್ಟು ಬೇರೆ ಕಡೆಗೆ ಹೋಗುವಂತಿಲ್ಲ. ಶಿಸ್ತು ಪಾಲಿಸದೇ ಇರುವ ಏಜೆಂಟರನ್ನು ಚುನಾವಣಾಧಿಕಾರಿ ಹೊರಗೆ ಹಾಕುವ ಅಧಿಕಾರ ಹೊಂದಿರುತ್ತಾರೆ. 58-ಸಿಂಧನೂರು, 59-ಮಸ್ಕಿ, 60-ಕುಷ್ಟಗಿ, 64-ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿಗೆ ನೆಲ ಮಹಡಿಯಲ್ಲಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಹಾಗೂ 92-ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವನ್ನು ಕಾಲೇಜಿನ ಮೊದಲನೇ ಮಹಡಿಯಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಮತ ಎಣಿಕೆ ಪ್ರಕ್ರಿಯೆಯ ವೇಳೆ ನಿಗದಿಪಡಿಸಿದ ಕ್ರಮದಂತೆ ಏಜೆಂಟರು ಕುಳಿತುಕೊಳ್ಳಬೇಕು. ಪ್ರತಿಯೊಬ್ಬ ಎಣಿಕೆ ಏಜೆಂಟ್ ಮತ ಎಣಿಕೆ ಪ್ರಕ್ರಿಯೆ ಮುಗಿಯುವವರೆಗೂ ತಾಳ್ಮೆಯಿಂದ ವರ್ತಿಸಬೇಕು. ಎಣಿಕೆ ಪ್ರಕ್ರಿಯೆ ಪ್ರಾರಂಭವಾಗುವುದಕ್ಕಿoತ ಮುಂಚೆ ಪ್ರಜಾ ಪ್ರಾತಿನಿಧ್ಯ ಕಾಯಿದೆ ಸೆಕ್ಷನ್ 128ರ ಪ್ರಕಾರ ಮತದಾನದ ರಹಸ್ಯ ಕಾಯ್ದುಕೊಳ್ಳುವ ಪ್ರತಿಜ್ಞೆ ಸ್ವೀಕರಿಸಬೇಕು. ಏಜೆಂಟರು ಕೇವಲ ಪೆನ್ನು ಮತ್ತು ಹಾಳೆ ತೆಗೆದುಕೊಂಡು ಬರಲು ಅವಕಾಶವಿದೆ. ಬರೆದುಕೊಳ್ಳಲು ನೋಟ್‌ಪ್ಯಾಡ್ ಮತ್ತು ಮತದಾನದ ದಿನದಂದು ಪ್ರಿಸೈಡಿಂಗ್ ಅಧಿಕಾರಿ ನೀಡಿರುವ 17-ಸಿ ಮತಪತ್ರಗಳ ಲೆಕ್ಕದ ಪ್ರತಿ ತೆಗೆದುಕೊಂಡು ಬರಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಅಭ್ಯರ್ಥಿಗಳಿಗೆ ತಿಳಿಸಿದರು.

ಯಾವುದೇ ಸಂದರ್ಭದಲ್ಲಿಯೂ ಮತಯಂತ್ರಗಳನ್ನು ಭೌತಿಕವಾಗಿ ಮುಟ್ಟಲು ಏಜೆಂಟರಿಗೆ ಅವಕಾಶವಿಲ್ಲ. ಮೊಬೈಲ್ ಫೋನ್‌ಗಳ ಸಂಗ್ರಹಣಾ ಕೌಂಟರ್ ಇರುವುದಿಲ್ಲವಾದ್ದರಿಂದ ಫೋನ್‌ಗಳನ್ನು ತೆಗೆದುಕೊಂಡು ಬರುವಂತಿಲ್ಲ. ಚುನಾವಣಾ ಆಯೋಗ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಚುನಾವಣಾ ತಹಸೀಲ್ದಾರ್ ರವಿಕುಮಾರ್ ವಸ್ತ್ರದ್, ಜಿಲ್ಲಾ ಪೊಲೀಸ್ ಡಿಎಸ್‌ಬಿ ಘಟಕದ ಪಿಐ ನಾಗರಾಜ ಆರ್. ಉಪಸ್ಥಿತರಿದ್ದರು.