ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯ ಕಾಪಾಡಿಕೊಳ್ಳಿ: ಡಾ.ಅನಿಲ್ ಸಲಹೆ

| Published : Feb 02 2024, 01:02 AM IST

ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯ ಕಾಪಾಡಿಕೊಳ್ಳಿ: ಡಾ.ಅನಿಲ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಯುವಕರು ಸಣ್ಣಪುಟ್ಟ ಆಸೆಗಳಿಗಾಗಿ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಯುವ ಜನತೆಯು ಉತ್ತಮ ಆರೋಗ್ಯ ಶೈಲಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯದಿಂದ ಇರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನಿಲ್ ತಿಳಿಸಿದರು. ‘ರಾಷ್ಟ್ರೀಯ ಯುವ ದಿನಾಚರಣೆ - ೨೦೨೪’ರ ಕಾರ್ಯಕ್ರಮಲ್ಲಿ ಮಾತನಾಡಿದರು.

ಉದ್ಘಾಟನೆ । ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಅಧಿಕಾರಿ । ರಾಷ್ಟ್ರೀಯ ಯುವ ದಿನಾಚರಣೆ-2024

ಕನ್ನಡಪ್ರಭ ವಾರ್ತೆ ಹಾಸನ

ಇತ್ತೀಚಿನ ದಿನಗಳಲ್ಲಿ ಯುವಕರು ಸಣ್ಣಪುಟ್ಟ ಆಸೆಗಳಿಗಾಗಿ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಯುವ ಜನತೆಯು ಉತ್ತಮ ಆರೋಗ್ಯ ಶೈಲಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯದಿಂದ ಇರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನಿಲ್ ತಿಳಿಸಿದರು.

ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್, ಮೆಕ್ಯಾನಿಕಲ್ ವಿಭಾಗದ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ದಿನಾಚರಣೆ - ೨೦೨೪’ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರವಾಗಿದ್ದು, ಯುವಕರು ದೇಶದ ಆಸ್ತಿ ಮತ್ತು ದೇಶದ ಭವಿಷ್ಯದ ಆಶಾಕಿರಣವಾಗಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬರು ಉತ್ತಮ ಆರೋಗ್ಯ ಹಾಗೂ ಉತ್ತಮ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು. ದುಶ್ಚಟಗಳು ಹಾಗೂ ದುರಭ್ಯಾಸಗಳು ಯುವಕರಿಗೆ ಗೊತ್ತಾಗದಂತೆ ಆಕ್ರಮಿಸಿಕೊಳ್ಳುತ್ತಿದ್ದು, ಇದರಿಂದ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಪ್ರತಿಯೊಬ್ಬ ಯುವಕನಿಗೆ ತನ್ನದೇ ಆದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದ್ಧತೆಗಳು ಇರುತ್ತವೆ. ಜವಾಬ್ದಾರಿಯನ್ನು ಅರಿತು ಮುನ್ನಡೆದರೆ ಯಾವುದೇ ತೊಂದರೆಗಳು ಬರುವುದಿಲ್ಲ. ಆಕರ್ಷಣೆಗಳು ಹೆಚ್ಚಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಜಾಗೃತರಾಗಿ ತಂತ್ರಜ್ಞಾನದ ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಧ್ಯೆ ಎಚ್ಚರಿಕೆಯಿಂದ ಆಯ್ಕೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಬಿ. ಸಂದ್ಯಾ ಮಾತನಾಡಿ, ಹೆಚ್ಚು ಯುವಜನರೇ ಎಚ್‌ಐವಿ ಏಡ್ಸ್‌ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿರುವುದು ಅಪಾಯಕಾರಿ ವಿಷಯವಾಗಿದೆ. ಇಂತಹ ರೋಗಗಳಿಗೆ ಚಿಕಿತ್ಸೆ ಇಲ್ಲ. ಆದರೆ ಬರದೇ ಇರುವಂತೆ ಯುವಜನತೆ ಎಚ್ಚರಿಕೆಯಿಂದ ಇದ್ದರೆ ತಡೆಯಬಹುದು. ಜಾಗ್ರತೆಯಿಂದ ಇದ್ದು ಕ್ಷಣಿಕ ಆಸೆ ಆಕಾಂಕ್ಷೆಗಳಿಗೆ ಒಳಗಾಗಬಾರದು ಎಂದು ಹೇಳಿದರು.

ಡಾಪ್ಕೋ ವಿಭಾಗದ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಸಣ್ಣಪುಟ್ಟ ಕಾರಣಗಳಿಂದಾಗಿ ಯುವಜನರು ಆತ್ಮಹತ್ಯೆ ಕಡೆಗೆ ವಾಲುತ್ತಿರುವುದು ಅಪಾಯಕಾರಿ ವಿಷಯವಾಗಿದೆ. ಸಿನಿಮಾಗಳ ಹೀರೋಗಳು ಮತ್ತು ಅವರು ಮಾಡುವ ಸ್ಟಂಟ್ ಹಾಗೂ ದುರಭ್ಯಾಸಗಳನ್ನು ಮಾದರಿಯಾಗಿ ಇಟ್ಟುಕೊಳ್ಳದೆ ಯುವ ಜನತೆ ಬದುಕನ್ನು ಪ್ರಾಯೋಗಿಕವಾಗಿ ತಂದೆ ತಾಯಿ ಹಾಗೂ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಕುಟುಂಬಗಳಿಗೆ ಆಧಾರವಾಗಿ ಇರಬೇಕಾದವರು ಅಡ್ಡದಾರಿಯನ್ನು ಹಿಡಿಯಬಾರದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ನೀಲಪ್ಪ ವಹಿಸಿಕೊಂಡಿದ್ದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ. ಚನ್ನಬಸವಗೌಡ, ಎನ್‌ಎಸ್‌ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಅಧಿಕಾರಿ ಡಾ. ಎಲ್ ತಿಮ್ಮೇಶ್, ಸಂಯೋಜಕ ಡಾ. ದಿನೇಶ ಎಂ.ಎಚ್. ವಿಭಾಗಗಳ ಮುಖ್ಯಸ್ಥರಾದ ಡಾ. ಮನೋಜ್ ಕೃಷ್ಣ, ಪ್ರೊ. ಶೈಲಜಾ ಇದ್ದರು.‘ರಾಷ್ಟ್ರೀಯ ಯುವ ದಿನಾಚರಣೆ - ೨೦೨೪’ರ ಕಾರ್ಯಕ್ರಮದಲ್ಲಿ ಡಿಎಚ್‌ಒ ಅನಿಲ್‌ ಮಾತನಾಡುತ್ತಿರುವುದು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ. ಚನ್ನಬಸವಗೌಡ, ಎನ್‌ಎಸ್‌ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಅಧಿಕಾರಿ ಡಾ. ಎಲ್ ತಿಮ್ಮೇಶ್ ಇತರರಿದ್ದರು.