ಇಂದಿನ ಜೀವನ ಶೈಲಿ ಬದಲಾಗುತ್ತಿರುವುದರಿಂದ ನಾವು ಬೇಗನೆ ಅನಾರೋಗ್ಯಕ್ಕೆ ಒಳಗಾಗುವ ಅಪಾಯ, ಸಾಧ್ಯತೆ ಹೆಚ್ಚಿರುತ್ತದೆ.

ಆರೋಗ್ಯ ದಿನಾಚರಣೆ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ ಹೊನ್ನಾವರ

ಇಂದಿನ ಜೀವನ ಶೈಲಿ ಬದಲಾಗುತ್ತಿರುವುದರಿಂದ ನಾವು ಬೇಗನೆ ಅನಾರೋಗ್ಯಕ್ಕೆ ಒಳಗಾಗುವ ಅಪಾಯ, ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದರ ಮೂಲಕ ರೋಗ ಬರದಂತೆ ಮುಂಜಾಗ್ರತೆ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದು ಡಾ. ಶಿವಾನಂದ ಹೆಗಡೆ ಹೇಳಿದರು.

ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್., ಐಕ್ಯೂಎಸಿ ಸೇರಿದಂತೆ ವಿವಿಧ ವಿಭಾಗಗಳ ಸಂಯೋಜನೆಯಡಿ ಆಯೋಜನೆಗೊಂಡ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯ ಎಂದರೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಉತ್ತಮವಾಗಿರುವುದಾಗಿದೆ. ನಮ್ಮ ಸುತ್ತಮುತ್ತಲಿನ ವಾತಾವರಣ ಸಹ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೈ ಬಿಪಿ, ಡಯಾಬಿಟಿಸ್, ಬೊಜ್ಜು ಹೆಚ್ಚಾಗುವಿಕೆ, ನಿದ್ರಾಹೀನತೆ ಸೇರಿದಂತೆ ಮೊದಲಾದ ಆರೋಗ್ಯದ ತೊಂದರೆಗಳು ನಮ್ಮ ಜೀವನ ಶೈಲಿಯ ಕಾರಣದಿಂದ ಬರುತ್ತವೆ. ಈ ತೊಂದರೆ ನಿರ್ಲಕ್ಷಿಸಿದರೆ ನಮ್ಮ ಪ್ರಾಣಕ್ಕೆ ಸಂಚಕಾರ ತರಬಹುದಾಗಿದೆ. ನಮ್ಮ ಜೀವನ ಸದಾ ದೈಹಿಕ ಚಟುವಟಿಕೆಯಿಂದ ಇರಬೇಕು. ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ ಮಾನಸಿಕ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಕಾಲೇಜು ವಿದ್ಯಾರ್ಥಿಗಳು ತಾವು ತಿನ್ನುವ ಆಹಾರ ಕ್ರಮದ ಬಗ್ಗೆ ಎಚ್ಚರವಿರಲಿ. ಜಂಕ್ ಪುಡ್‌ಗಳಿಂದ ದೂರವಿರಿ. ಮನೆಯ ಆಹಾರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರಲಿ. ಇಂದು ಆರೋಗ್ಯವನ್ನು ಕಾಪಾಡಿಕೊಂಡರೆ ನಾಳೆ ರೋಗದಿಂದ ದೂರವಿರಬಹುದಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದರು.