ಸಾರಾಂಶ
ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ ಯಾದಗಿರಿ ಜಿಲ್ಲೆಯಲ್ಲಿ ಹಾದು ಹೋಗುವ 27ರಿಂದ 97 ಕಿ.ಮೀ. ರಸ್ತೆಯಲ್ಲಿ 71 ಕಿ.ಮೀ ರಸ್ತೆಯನ್ನು 1575 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಮಹಾರಾಷ್ಟ್ರ ಗಡಿಯಿಂದ ಶಹಾಪುರ ತನಕ ಪರಿವೀಕ್ಷಣೆ ನಡೆಸಿದ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಸೂರತ್ ಚೆನ್ನೈ ಭಾರತ್ ಮಾಲ ರಸ್ತೆಯು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಹಾದು ಹೋಗಲಿದೆ. ಇದರ ಕಾಮಗಾರಿ ಗುಣಮಟ್ಟದೊಂದಿಗೆ ನಡೆಸಿ ಪೂರ್ಣಗೊಳಿಸಲು ಸಂಸದ ಡಾ. ಉಮೇಶ್ ಜಾಧವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ ಯಾದಗಿರಿ ಜಿಲ್ಲೆಯಲ್ಲಿ ಹಾದು ಹೋಗುವ 27ರಿಂದ 97 ಕಿ.ಮೀ. ರಸ್ತೆಯಲ್ಲಿ 71 ಕಿ.ಮೀ ರಸ್ತೆಯನ್ನು 1575 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಪರಿಶೀಲನೆಗಾಗಿ ಮಹಾರಾಷ್ಟ್ರ ಗಡಿಯಿಂದ ಶಹಾಪುರ ತನಕ ಪರಿವೀಕ್ಷಣೆ ಮಾಡಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ರಸ್ತೆಯನ್ನು ಗುಣಮಟ್ಟ ಕಾಯ್ದುಕೊಂಡು ಶೀಘ್ರ ಪೂರ್ಣಗೊಳಿಸಬೇಕು. ಈ ರಸ್ತೆ ನಿರ್ಮಾಣವಾಗುವುದರೊಂದಿಗೆ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದರು. ನಾಲ್ಕು ತಿಂಗಳ ಹಿಂದೆ ಪರಿಶೀಲನೆ ಕೈಗೊಂಡಾಗ ಮಂದಗತಿಯಲ್ಲಿದ್ದ ಕೆಲಸ ಕಾರ್ಯ ಈಗ ಭರದಿಂದ ಸಾಗುತ್ತಿದೆ. ಕಾರ್ಮಿಕರು ಸುಡು ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದು ಮೆಚ್ಚುವಂಥದ್ದು ಹಾಗೂ ಅಧಿಕಾರಿಗಳಿಗೆ ಕೂಡ ಅಭಿನಂದನೆ ಸಲ್ಲಬೇಕಾಗಿದೆ ಎಂದರು.ಭಾರತ್ ಮಾಲಾ ರಸ್ತೆಯಿಂದ ಜಮೀನುಗಳ ಮೌಲ್ಯ ಹೆಚ್ಚಳ:
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ನೀಡಿದ ಬಲು ದೊಡ್ಡ ಗಿಫ್ಟ್ ಇದಾಗಿದೆ. ಸಾಗರ್ ಮಾಲ ರಸ್ತೆ ನಿರ್ಮಾಣವಾಗುವುದರಿಂದ ಅಕ್ಕಪಕ್ಕಗಳ ಜಮೀನುಗಳ ಮೌಲ್ಯವು ದಿಢೀರನೆ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ. ಸಿಂಗಾಪುರ ಮಾದರಿಯ ಈ ರಸ್ತೆ ನಿರ್ಮಾಣವಾಗುವುದರಿಂದ ಪ್ರಗತಿಯ ಜೊತೆಗೆ ಸಂಪರ್ಕ ಕ್ರಾಂತಿ ಉಂಟಾಗಲಿದೆ.ಕಲಬುರಗಿ ಲೋಕಸಭಾ ಕ್ಷೇತ್ರ 71 ಕಿ.ಮೀ. ರಸ್ತೆ ಹಾದು ಹೋಗುವ ಕಾರಣ ಸೊಲ್ಲಾಪುರ ಭಾಗ ಮತ್ತು ಬೆಂಗಳೂರು ಕಡೆಗೆ ಸಂಚಾರದ ಅವಧಿ ಉಳಿತಾಯವಾಗಲಿದೆ ಮತ್ತು ಸುರಕ್ಷಿತ ಪ್ರಯಾಣ ನಮ್ಮದಾಗಲಿದೆ. ಇಂತಹ ದೊಡ್ಡ ಕೊಡುಗೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ಲೋಕಸಭಾ ಸದಸ್ಯರು ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಭಾರತ್ ಮಾಲಾ ರಸ್ತೆ ಪರಿಶೀಲನಾ ತಂಡದಲ್ಲಿ ಬಿಜೆಪಿಯ ಮುಖಂಡರಾದ ಮಾಲೀಕಯ್ಯ ವಿ.ಗುತ್ತೇದಾರ್, ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶಿವರಾಜ್ ರದ್ದೇವಾಡಗಿ, ಈ ಹೆದ್ದಾರಿಯ ಗುತ್ತಿಗೆ ಪಡೆದ PNC ಕಂಪನಿಯ ಪ್ರಬಂಧಕರಾದ್ ಅಜಯ್ ದೇವ್ ಹಾಗೂ ಇತರರು ಇದ್ದರು.