ಕನ್ನಡಪ್ರಭ ವಾರ್ತೆ ಮೈಸೂರು
ರೈತರು ಸಮತೋಲಿತ ರಸಗೊಬ್ಬರವನ್ನು ಬಳಸಿ ಮಣ್ಣಿನ ಆರೋಗ್ಯ ಉಳಿಸುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಕೆ. ನಾಗರಾಜ್ ಕರೆ ನೀಡಿದರು.ಮೈಸೂರು ತಾಲೂಕಿನ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ 2026- 27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ. ಕೋಟೆ ತಾಲೂಕು ಕಸಬಾ ಹೋಬಳಿಯ ಹಿರೇಹಳ್ಳಿ ಎ ಗ್ರಾಮದಲ್ಲಿ ಆಯೋಜಿಸಿದ್ದ ಹತ್ತಿ ಮತ್ತು ಮುಸುಕಿನಜೋಳ ಬೆಳೆಗಳಲ್ಲಿ ಸುಧಾರಿತ ಬೇಸಾಯ ತಾಂತ್ರಿಕತೆಗಳು, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ’ ಕುರಿತು ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರೈತರು ರಸಗೊಬ್ಬರಗಳನ್ನು ಬೆಳೆಗಳಿಗೆ ವೈಜ್ಞಾನಿಕವಾಗಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಮತೋಲಿತ ರಸಗೊಬ್ಬರ ಬಳಸಬೇಕು ಹಾಗೂ ಅತಿಯಾದ ರಾಸಾಯನಿಕಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಕುಂಠಿತವಾಗುವುದನ್ನು ತಪ್ಪಿಸಲು ಹೆಚ್ಚು ಪ್ರಮಾಣದಲ್ಲಿ ಸಾವಯವ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ಬಳಸಬೇಕು ಎಂದು ಅವರು ಸಲಹೆ ನೀಡಿದರು.ಮುಸುಕಿನ ಜೋಳ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು, ವಿವಿಧ ಕೀಟ/ ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಸಸ್ಯರೋಗ ಶಾಸ್ತ್ರಜ್ಞೆ ಡಾ.ಆರ್.ಎನ್. ಪುಷ್ಪಾ ಮಾತನಾಡಿ, ಮುಸುಕಿನಜೋಳದಲ್ಲಿ ಬೂಜು/ ಕೇದಿಗೆ ರೋಗ ಉಲ್ವಣಗೊಳ್ಳುತ್ತಿದ್ದು, ಇದರಿಂದ ಇಳುವರಿ ನಷ್ಟ ಸಾಧ್ಯತೆ ಇದೆ. ರೈತರು ರೋಗ ಲಕ್ಷಣ ಕಂಡ ಕೂಡಲೆ ಮೆಟಲಾಕ್ಸಿಲ್ 8 ಡಬ್ಲುಪಿ+ ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತೀ 1 ಲೀಟರ್ ನೀರಿಗೆ 2 ಗ್ರಾಂನಂತೆ (ಎಕರೆಗೆ 600 ಗ್ರಾಂ) ಮಿಶ್ರಣ ಮಾಡಿ ಗರಿಗಳ ತಳಭಾಗ ಹಾಗೂ ಮೇಲ್ಭಾಗಕ್ಕೂ ಸಿಂಪಡಿಸಬೇಕು ಎಂದು ತಿಳಿಸಿದರು.
ಮುಸುಕಿನ ಜೋಳ ಬಿತ್ತನೆಗೆ ಮೊದಲು ಪ್ರತಿ 1 ಕೆ.ಜಿ ಬಿತ್ತನೆ ಬೀಜಕ್ಕೆ 3 ಗ್ರಾಂ ಮೆಟಲಾಕ್ಸಿಲ್ 8 ಡಬ್ಲುಪಿ+ ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶೇ.30 ರಿಂದ 40 ರಷ್ಟು ರೋಗ ನಿಯಂತ್ರಣವಾಗುತ್ತದೆ ಎಂದರು.
ಈ ಭಾಗದ ಪ್ರಮುಖ ಬೆಳೆಗಳಾದ ಹತ್ತಿ ಮತ್ತು ಶುಂಠಿ ಬೆಳೆಗಳಲ್ಲಿ ವಿವಿಧ ಕೀಟ, ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಶ್ರೀಧರ್ ಔಟ್ ರೀಚ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ 100 ಹೆಚ್ಚಿನ ರೈತರು, ರೈತ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದರು. ಔಟ್ ರೀಚ್ ಸಂಸ್ಥೆ ಯೋಜನಾ ಸಂಯೋಜಕ ವಿಲಿಯಂ ಡಿಸೊಜ, ಹಿರೇಹಳ್ಳಿ ಎ ಗ್ರಾಮದ ಪ್ರಗತಿಪರ ರೈತರು, ರೈತ ಮುಖಂಡರು ಇದ್ದರು. ಜಿ.ಕೆ. ಶಿಲ್ಪಾ ಸ್ವಾಗತಿಸಿದರು.