ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುವ ನಿಟ್ಟಿನಲ್ಲಿ ಶಿಮುಲ್‌ ಹಾಲಿನ ಶೇಖರಣೆ, ಸಂಸ್ಕರಣೆ ಮತ್ತು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಸ್ವಚ್ಛತೆ, ಅಗತ್ಯ ಗುಣಮಟ್ಟ ಕಾಪಾಡಿಕೊಳ್ಳುವಂತೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಸೂಚಿಸಿದ್ದಾರೆ.

- ಎಚ್‌.ಕಲ್ಪನಹಳ್ಳಿ ಸಮೀಪ ಕಟ್ಟಡ ನಿರ್ಮಾಣ ಸಂಬಂಧ ಚರ್ಚೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುವ ನಿಟ್ಟಿನಲ್ಲಿ ಶಿಮುಲ್‌ ಹಾಲಿನ ಶೇಖರಣೆ, ಸಂಸ್ಕರಣೆ ಮತ್ತು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಸ್ವಚ್ಛತೆ, ಅಗತ್ಯ ಗುಣಮಟ್ಟ ಕಾಪಾಡಿಕೊಳ್ಳುವಂತೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಸೂಚಿಸಿದರು.

ತಾಲೂಕಿನ ಬಾತಿ ಗ್ರಾಮದ ಶಿವಮೊಗ್ಗ– ಚಿತ್ರದುರ್ಗ– ದಾವಣಗೆರೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಶಿಮುಲ್) ನಿಯಮಿತ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದರು. ಹಾಲಿನ ಸಂಗ್ರಹಣೆಯಿಂದ ಗ್ರಾಹಕರಿಗೆ ತಲುಪಿಸುವವರೆಗಿನ ವಿವಿಧ ಹಂತಗಳ ಕಾರ್ಯವೈಖರಿ ಉತ್ತಮವಾಗಿದೆ ಎಂದರು.

ಹಾಲು ಶೇಖರಣೆ, ಸಂಸ್ಕರಣೆ, ಉತ್ಪಾದನೆ, ಪ್ಯಾಕಿಂಗ್, ಸ್ವಚ್ಛತೆ, ಗುಣಮಟ್ಟದ ಪರೀಕ್ಷೆ, ಸಂಗ್ರಹಣಾ ಪ್ರಕ್ರಿಯೆಗಳ ಗಮನಿಸಿದೆವು. ಹಾಲಿನ ಗುಣಮಟ್ಟ ಕಾಪಾಡುವುದು, ಉತ್ಪಾದನಾ ಘಟಕಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ, ಗ್ರಾಹಕರಿಗೆ ಸುರಕ್ಷಿತ ಹಾಲು, ಹಾಲಿನ ಉತ್ಪನ್ನಗಳನ್ನು ಒದಗಿಸುವುದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ, ಗುಣಮಟ್ಟ ನಿಯಂತ್ರಣ ಕ್ರಮಗಳ ಕಡೆಗೆ ಗಮನಹರಿಸುವಂತೆ ಅವರು ಸೂಚಿಸಿದರು.

ನಂತರ ಶಿಮುಲ್ ಪದಾಧಿಕಾರಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಕೆ.ಎಸ್. ಬಸವಂತಪ್ಪ, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಎಚ್.ಕಲ್ಪನಹಳ್ಳಿ ಬಳಿ ನೂತನವಾಗಿ ಹಾಲು ಒಕ್ಕೂಟದ ಕಟ್ಟಡ ನಿರ್ಮಾಣ, ಉದ್ದೇಶಿತ ಕಟ್ಟಡ ನಿರ್ಮಾಣ ಯೋಜನೆ, ಅಗತ್ಯ ಸಿದ್ಧತೆ, ಸಂಬಂಧಿತ ಚರ್ಚಿಸಿ, ಕಾಮಗಾರಿಯನ್ನು ಯೋಜಿತ ರೀತಿ ಕೈಗೊಳ್ಳುವ ಬಗ್ಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಿದರು.

ಹೈನುಗಾರಿಕೆ ಮತ್ತು ಹಾಲು ಉತ್ಪಾದಕರಿಗೆ ಅನುಕೂಲ ಆಗುವಂತೆ ಹಾಲು ಒಕ್ಕೂಟದ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಗ್ರಾಹಕರ ಆರೋಗ್ಯದ ಜೊತೆಗೆ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವ ಕಡೆಗೂ ಶಿಮುಲ್ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದು ಶಿಮುಲ್ ಅಧಿಕಾರಿಗಳಿಗೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.

ಶಿಮುಲ್ ಉಪಾಧ್ಯಕ್ಷ ಎಸ್.ಚೇತನ್ ನಾಡಿಗೇರ್, ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್, ನಿರ್ದೇಶಕರಾದ ಎಚ್.ಕೆ.ಬಸಪ್ಪ, ಬಸವರಾಜಪ್ಪ, ಜಿ.ಪಿ.ರೇವಣಸಿದ್ದಪ್ಪ, ಜಗದೀಶಪ್ಪ ಬಣಕಾರ್, ರವಿಕುಮಾರ, ಶೇಖರಪ್ಪ, ಡೈರಿ ಮ್ಯಾನೇಜರ್ ನವೀನ, ಜನರಲ್ ಮ್ಯಾನೇಜರ್ ಜಯಪ್ರಕಾಶ, ಡೆಪ್ಯುಟಿ ಮ್ಯಾನೇಜರ್ ಬಿ.ಎಸ್.ವಿಜಯ್ ಸೇರಿದಂತೆ ಕೇಂದ್ರದ ಸಿಬ್ಬಂದಿ ಇದ್ದರು.

- - -

-27ಕೆಡಿವಿಜಿ6, 8:

ದಾವಣಗೆರೆ ತಾಲೂಕಿನ ಬಾತಿ ಗ್ರಾಮದಲ್ಲಿರುವ ಶಿಮುಲ್‌ಗೆ ಭೇಟಿ ನೀಡಿದ ಸಚಿವ ಬಸವಂತಪ್ಪ ಅವರು ವ್ಯವಸ್ಥೆಗಳ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.