ಜ್ಞಾ‌ನ ಸಂಪಾದನೆ ವಿಚಾರದಲ್ಲಿ ಶ್ರೀಸತ್ಯಾತ್ಮತೀರ್ಥರು ಮೇರುಶಿಖರ. ಧರ್ಮ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಶ್ರೀಗಳು ನಮ್ಮ ಹೆಮ್ಮೆ. ಸನಾತನ ಸಂಪ್ರದಾಯದ ರಕ್ಷಣೆ ಹೊಣೆ ಹೊತ್ತಿರುವ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು.

ಧಾರವಾಡ:ನಮ್ಮ ಮಧ್ಯೆ ಆಚಾರ-ವಿಚಾರದಲ್ಲಿ ಭಿನ್ನಮತ ಇದ್ದರೂ ಸಮಾಜದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಉತ್ತರಾದಿಮಠದಲ್ಲಿ ಶ್ರೀಸತ್ಯಾತ್ಮತೀರ್ಥರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದ ಅವರು, ಜ್ಞಾ‌ನ ಸಂಪಾದನೆ ವಿಚಾರದಲ್ಲಿ ಶ್ರೀಸತ್ಯಾತ್ಮತೀರ್ಥರು ಮೇರುಶಿಖರ. ಧರ್ಮ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಶ್ರೀಗಳು ನಮ್ಮ ಹೆಮ್ಮೆ. ಸನಾತನ ಸಂಪ್ರದಾಯದ ರಕ್ಷಣೆ ಹೊಣೆ ಹೊತ್ತಿರುವ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು ಎಂದರು.ಹಿಂದೂ ಧರ್ಮ ಒಂದೇ. ಈ ವಿಚಾರದಲ್ಲಿ‌ ಯಾರೂ ಯಾವುದೇ ಆಚಾರ-ವಿಚಾರ, ಸಂಪ್ರದಾಯದ ಬಗ್ಗೆ ಟೀಕಿಸುವುದನ್ನು ಬಿಡಬೇಕು. ಇದರಿಂದ ಸಮಾಜದಲ್ಲಿ ಒಡಕಾಗುತ್ತದೆ. ಇದರಿಂದ ಹೊರಗಿನ ಶಕ್ತಿಗಳಿಗೆ ಬಲ ಬಂದಂತಾಗುತ್ತದೆ. ಬಾಹ್ಯ ಶಕ್ತಿಗಳನ್ನು ಎದುರಿಸಲು ಮೊದಲು ನಾವು ಒಂದಾಗಬೇಕು ಎಂದು ಜೋಶಿ ಹೇಳಿದರು.

ಎಲ್ಲದಕ್ಕೂ ಮೂಲ ಶಿಕ್ಷಣ. ಆಧ್ಯಾತ್ಮಿಕ, ನೈತಿಕ ಶಿಕ್ಷಣ ಸಮಾಜಕ್ಕೆ ನೀಡುವ ಗುರುತರ ಜವಾಬ್ದಾರಿ ಹೊತ್ತಿರುವ ಸಚಿವ ಪ್ರಹ್ಲಾದ ಜೋಶಿ ಅವರು ನಮ್ಮ‌-ನಿಮ್ಮೆಲ್ಲರ ಹೆಮ್ಮೆ. ನೈತಿಕ ಮೌಲ್ಯಗಳ ಪ್ರತಿಪಾದನೆ ಶಿಕ್ಷಣದ ಆದ್ಯತೆ ಮತ್ತು ಅಗತ್ಯತೆ ಆಗಿದ್ದು ಇಂತಹ ಗುರುತರ ಜವಾಬ್ದಾರಿಯನ್ನು ಅವರು ಯಶಸ್ವಿಯಾಗಿ ನಿರ್ವಹಿಸುವ ಶಕ್ತಿ ಮತ್ತು ಅನುಗ್ರಹವನ್ನು ಶ್ರೀಲಕ್ಷ್ಮೀ ಹಯಗ್ರೀವದೇವರು ಕರುಣಿಸಲಿ ಎಂದು ಶ್ರೀಸತ್ಯಾತ್ಮತೀರ್ಥರು ನುಡಿದರು.ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಕಾರ್ಯಾಧ್ಯಕ್ಷ ಆರ್.ಎಂ. ಕುಲಕರ್ಣಿ, ಅಶೋಕ ಹುದ್ದಾರ, ಡಾ. ಆನಂದ ಪಾಂಡುರಂಗಿ, ಪಾಲಿಕೆ ಸದಸ್ಯ ವಿಷ್ಣುತೀರ್ಥ ಕೊರ್ಲಳ್ಳಿ, ಮಾಜಿ‌ ಮೇಯರ್ ಈರೇಶ ಅಂಚಟಗೇರಿ, ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಮಲ್ಲಿಕಾರ್ಜುನ ಪಾಟೀಲ, ಉದ್ಯಮಿ ಪ್ರಶಾಂತ ಬೆಲ್ಲದ ನರಹರಿ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಗೆ ದಿಗ್ವಿಜಯ ರಾಮ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಂ‌. ರವಿ ಆಚಾರ್ ಮತ್ತೀಹಳ್ಳಿ ಪಂ. ಕೇಶವಾಚಾರ ಕರೂರ, ಪಂ. ಕಪಿಲಾಚಾರ್ ಗಲಗಲಿ, ಪಂ. ಪೂರ್ಣಪ್ರಜ್ಞಾಚಾರ ಮಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀಮಠದ ದಿಬಾನರಾದ ಶಶಿಧರ ಆಚಾರ್, ಪಂ. ರವಿ ಆಚಾರ್ ಮತ್ತೀಹಳ್ಳಿ ಸ್ವಾಗತಿಸಿದರು. ಪಂ. ಕಪಿಲಾಚಾರ್ ಗಲಗಲಿ ನಿರೂಪಿಸಿದರು.