ಬೇಸಿಗೆ ದಿನಗಳಲ್ಲಿ ತೋಟದಲ್ಲಿ ತೇವಾಂಶ ನಿರ್ವಹಣೆ ಅತಿ ಮುಖ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರೋಹಿತ್ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಬೇಸಿಗೆ ದಿನಗಳಲ್ಲಿ ತೋಟದಲ್ಲಿ ತೇವಾಂಶ ನಿರ್ವಹಣೆ ಅತಿ ಮುಖ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರೋಹಿತ್ ಸಲಹೆ ನೀಡಿದರು.ತಾಲೂಕಿನ ಸಿಂಸೆಯ ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಭಾಂಗಣದಲ್ಲಿ ನಡೆದ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ತೋಟಗಳ ನಿರ್ವಹಣೆ ಹಾಗೂ ರೋಗ, ಕೀಟ ನಿರ್ವಹಣೆ ಬಗ್ಗೆ ರೈತರಿಗೆ ಸಲಹೆ ನೀಡಿದರು. ಬೇಸಿಗೆ ದಿನಗಳಲ್ಲಿ ತೋಟದಲ್ಲಿ ಉಳುಮೆ ಮಾಡಬಾರದು. ಕಳೆ, ಕೃಷಿ ತ್ಯಾಜ್ಯ ಉಳಿಸಿಕೊಂಡರೆ ತೇವಾಂಶ ಉಳಿಯಲಿದೆ.ಹನಿ ನೀರಾವರಿ, ಸ್ಪಿಂಕ್ಲರ್ ಮೂಲಕ ನೀರು ನೀಡಬಹುದು.ಅವಶ್ಯಕತೆ ಇದ್ದವರು ಗಿಡಗಳ ಬುಡದಲ್ಲಿ ವೀಡ್ ಮ್ಯಾಟ್ ಬಳಸಿದರೆ ತೇವಾಂಶ ಉಳಿಯಲಿದೆ.ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ.ಇದರ ಹತೋಟಿಗೆ ತೋಟಗಾರಿಕೆ ಇಲಾಖೆಯ ಸಲಹೆ ಪಡೆದು ಪ್ರೋಪಿಕೋನ್ ಜೋಲ್ ಎಂಬ ಔಷದಿಯನ್ನು 200 ಲೀಟರ್ ನ 1 ಬ್ಯಾರೆಲ್ ಗೆ 200 ಎಂ.ಎಲ್ ಹಾಕಿ ಸಿಂಪರಣೆ ಮಾಡಬಹುದು.ರೈತರು ಆರ್ಥಿಕ ಪ್ರಗತಿಗಾಗಿ ಅಡಿಕೆ ಬೆಳೆ ಜೊತೆಗೆ ಕಾಳುಮೆಣಸು, ಜಾಯಿ ಕಾಯಿ, ಲವಂಗ, ಏಲಕ್ಕಿ, ಮೈನರ್ ಪ್ರೂಟ್ಸ್ ಬೆಳೆಯಬಹುದು ಎಂದರು.
ಸೋಷಿಯಲ್ ವೆಲ್ ಫೇರ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ, ಕಳೆದ 35 ವರ್ಷಗಳಿಂದ ಸೋಷಿಯಲ್ ವೆಲ್ ಫೇರ್ ಸೊಸೈಟಿಯು ಕೃಷಿ ಕುಟುಂಭದ ಸರ್ವೋತೋಮುಖ ಅಭಿವೃದ್ದಿಗಾಗಿ ವಿವಿಧ ಇಲಾಖೆಗಳ ಮೂಲಕ ಅನೇಕ ತರಬೇತಿಗಳನ್ನು ನೀಡುತ್ತಾ ಬಂದಿದೆ.ಇಂದು ಸಹ ತರಬೇತಿ ಹಮ್ಮಿಕೊಂಡಿದ್ದು ರೈತ ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ನೆದರ್‌ಲ್ಯಾಂಡ್ ದೇಶದ ಸೋಲಿಡರ್ ಮೆಟ್ ಇಂಡಿಯಾ ಕಂಪನಿಯ ಬಿಸಿನೆಸ್ ಅಧಿಕಾರಿ ರಾಬರ್ಟ್ ವ್ಯಾನ್ ಮಾತನಾಡಿ, ಇತ್ತೀಚಿಗೆ ಎಲ್ಲಾ ಕೃಷಿಕರೂ ಯಂತ್ರದ ಮೇಲೆ ಅವಲಂಬನೆ ಆಗಿರುವುದರಿಂದ ವಿದ್ಯುತ್ ಇಲ್ಲದಿದ್ದರೂ ಸೋಲಾರ್ ಮೂಲಕ ಪಂಪ್, ಇತರ ಯಂತ್ರಗಳನ್ನು ಉಪಯೋಗಿಸಬಹುದು. ರೈತರು ಪ್ರತಿ ವರ್ಷ ಆದಾಯ ಹಾಗೂ ಖರ್ಚಿನ ಲೆಕ್ಕವನ್ನು ಬರೆಯಬೇಕು. ಒಂದೊಂದು ವರ್ಷ ಒಂದೊಂದು ಬೆಳೆಯ ಬೆಲೆ ಹೆಚ್ಚು ಕಡಿಮೆಯಾಗಲಿದೆ. ಇದನ್ನು ರೈತರು ಮನವರಿಕೆ ಮಾಡಿಕೊಂಡು ಹೊಸ ಬೆಳೆಗಳನ್ನು ಬೆಳೆಯಬೇಕು ಎಂದು ಕರೆ ನೀಡಿದರು.
ಶಿವಮೊಗ್ಗದ ಉದ್ಯಮಿ, ಕೃಷಿಕರಾದ ಜೋಮಿ ಅಡಕೆ ಬೆಳೆ ಹಾಗೂ ಕಾಳು ಮೆಣಸು ಬೆಳೆಗಳ ರೋಗಗಳ ಬಗ್ಗೆ ಹಾಗೂ ರೋಗದ ಹತೋಟಿ, ಮ್ಯಾಂಗೋಸ್ಟಿನ್ ಬೆಳೆಯ ಮಾಹಿತಿ ನೀಡಿದರು. ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಸಿನಿ ಜೋರ್ಜ್ ಸಾಂತ್ವನ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಸೋಷಿಯಲ್ ವೆಲ್ ಫೇರ್ ಸೊಸೈಟಿಯ ನಿರ್ದೇಶಕ ಫಾ.ಜೋಬೀಶ್ ವಹಿಸಿದ್ದರು. ತೋಟಗಾರಿಕೆ ಇಲಾಖೆಯ ಕಿರಿಯ ನಿರ್ದೇಶಕ ನವೀನ್ ಹಾಜರಿದ್ದರು. ಅಶ್ವಿನಿ ಸ್ವಾಗತಿಸಿದರು. ಸಿನಿ ಜೋಸ್ ಕಾರ್ಯಕ್ರಮ ನಿರೂಪಿಸಿದರು. ಸ್ವಸಹಾಯ ಸಂಘಗಳ ರೈತ ಸದಸ್ಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.