ಜನಸಂಖ್ಯಾ ಸ್ಥಿರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ

| Published : Jul 11 2025, 11:48 PM IST

ಜನಸಂಖ್ಯಾ ಸ್ಥಿರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜನಸಂಖ್ಯಾ ಸ್ಥಿರತೆ ಜಾಗೃತಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿ ರೇಣುಕಾಪ್ರಸಾದ್‌ ಚಾಲನೆ ನೀಡಿದರು.

ಡಾ.ರೇಣುಕಾಪ್ರಸಾದ್‌ ಹೇಳಿಕೆ । ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನೆಲೆ ಜಾಗೃತಿ ಜಾಥಾಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಬೆಳೆಯುತ್ತಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿ ಜನಸಂಖ್ಯಾ ಸ್ಥಿರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದರು.

ಇಲ್ಲಿನ ಬುದ್ಧನಗರ ಆರೋಗ್ಯ ಕೇಂದ್ರ ಆವರಣದಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಜನಸಂಖ್ಯೆ ಹೆಚ್ಚಾದಂತೆ ಬಡತನ, ಅರಣ್ಯನಾಶ, ಮೂಲಭೂತ ಸೌಕರ್ಯಗಳ ಕೊರತೆ, ಆಹಾರದ ಕೊರತೆ, ಶಿಕ್ಷಣದ ಕೊರತೆ, ನೀರು, ಜಲ, ವಾಯುಮಾಲಿನ್ಯ ಉಂಟಾಗಿ ಪರಿಸರ ಕಲ್ಮಶವಾಗಿ ಸಾಂಕ್ರಾಮಿಕ ರೋಗಗಳು ತಲೆದೋರಬಹುದು. ಗ್ರಾಮಾಂತರ ಪ್ರದೇಶದಿಂದ ಜನರು ಉದ್ಯೋಗಕ್ಕಾಗಿ ನಗರದತ್ತ ಸಾಗುತ್ತಿದ್ದು, ನಗರೀಕರಣ ಉಂಟಾಗುವುದರ ಜತೆಗೆ ನಗರ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ ಎಂದು ಹೇಳಿದರು.

ಭೂಮಿಯ ಗಾತ್ರ ಇದ್ದಷ್ಟೇ ಇದೆ. ಆದರೆ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿದೆ. ಪ್ರಯುಕ್ತ ಜನಸಂಖ್ಯಾ ಸ್ಥಿರತೆ ಕಾಪಾಡಿಕೊಂಡು ಪರಿಸರ ಸಂರಕ್ಷಣೆಯ ಜತೆಗೆ ಜಲ ಮಾಲಿನ್ಯವಾಗದಂತೆ ನಿಗಾವಹಿಸಿ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ ಮಾತನಾಡಿ, ಕರ್ನಾಟಕದಲ್ಲಿ ಫಲವತ್ತತೆ ದರ 1.7 ಇದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ 1.8 ಇದೆ. ಅಂದರೆ ಕುಟುಂಬದಲ್ಲಿ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದವರಾಗಿದ್ದು, ಜನಸಂಖ್ಯಾ ಸ್ಥಿರತೆ ಕಾಪಾಡಿಕೊಳ್ಳುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕುಟುಂಬ ಕಲ್ಯಾಣ ಶಾಶ್ವತ ವಿಧಾನಗಳಿಗಿಂತ ಆಧುನಿಕ ತಾತ್ಕಾಲಿಕ ವಿಧಾನಗಳ ಕಡೆ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಎರಡು ಮಕ್ಕಳನ್ನು ಹೊಂದಿದ ದಂಪತಿಗಳು ಕುಟುಂಬ ಕಲ್ಯಾಣ ಆಧುನಿಕ ತಾತ್ಕಾಲಿಕ ವಿಧಾನಗಳನ್ನು ಅನುಸರಿಸಬಹುದು ಎಂದರು.

ತಾಲೂಕು ಅರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಜನಸಂಖ್ಯಾ ಸ್ಪೋಟದ ಬಗ್ಗೆ ಮತ್ತು ಜನಸಂಖ್ಯಾ ಸ್ಥಿರತೆ ಕಾಪಾಡುವ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಜಾಗೃತಿ ಜಾಥಾದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ ಮತ್ತು ಬಿ.ಜಾನಕಿ. ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಕಾಶಿ, ಡಾ.ನಾಗರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ವೈದ್ಯಾಧಿಕಾರಿಗಳಾದ ಡಾ.ಸುರೇಂದ್ರ. ಡಾ.ಅಕ್ಷತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ ಮೂರ್ತಿ, ಪ್ರವೀಣ್ ಕುಮಾರ್, ಸಿರೀಶ್, ರುದ್ರಮುನಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಮತ್ತು ಸರ್ಕಾರಿ ಬಿಎಸ್‍ಸಿ ನಸಿರ್ಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.