ಸಾರಾಂಶ
ಸಾಗರ: ಇಲ್ಲಿನ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮೈತ್ರಿ ಪಾಟೀಲ್ ಅಧ್ಯಕ್ಷರಾಗಿ, ಸವಿತಾ ವಾಸು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಹರಸಾಹಸ ಪಟ್ಟು ಅಧಿಕಾರ ಉಳಿಸಿಕೊಂಡಿದೆ. ೩೧ ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ ೧೭, ಕಾಂಗ್ರೆಸ್ ೧೦, ಪಕ್ಷೇತರರು ನಾಲ್ವರು ಸದಸ್ಯರಿದ್ದಾರೆ. ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ, ಬಿಸಿಎಂಎ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೈತ್ರಿ ಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ವಾಸು ಸ್ಪರ್ಧೆ ಮಾಡಿದರೆ, ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮಧುಮಾಲತಿ, ಉಪಾಧ್ಯಕ್ಷ ಸ್ಥಾನಕ್ಕೆ ಗಣಪತಿ ಮಂಡಗಳಲೆ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಬಿಜೆಪಿ ೧೭ ಮತ ಪಡೆದರೆ, ಕಾಂಗ್ರೆಸ್ ೧೫ ಮತ ಪಡೆಯಿತು. ಬಿಜೆಪಿಯಿಂದ ಅಡ್ಡ ಮತದಾನ : ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಅತ್ಯಂತ ಕುತೂಹಲಕಾರಿಯಾದ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಬಿಜೆಪಿ ಕಡೆಯಿಂದ ಸಂಸದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ಕಡೆಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಮತದಾನ ಮಾಡಿದರು. ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಬೇಳೂರು ಮೂರು ಗಂಟೆಗಳ ಕಾಲ ತಮ್ಮ ಪಕ್ಷವನ್ನು ಗೆಲ್ಲಿಸಲು ಸಭೆಯಲ್ಲಿ ಕುಳಿತಿದ್ದು ವಿಶೇಷವಾಗಿತ್ತು. ಬಿಜೆಪಿ ೧೭ ಸದಸ್ಯರನ್ನು ಹೊಂದಿದ್ದರೂ, ಅಂತಿಮವಾಗಿ ೧೫ ಸದಸ್ಯರ ಮತವನ್ನು ಮಾತ್ರ ಪಡೆಯಿತು. ಬಿಜೆಪಿಯಿಂದ ಗೆದ್ದಿದ್ದ ಶಂಕರ ಅಳ್ವಿಕೋಡಿ ಕಾಂಗ್ರೆಸ್ ಪರ ಕೈ ಎತ್ತಿದರೆ, ಇನ್ನೋರ್ವ ಸದಸ್ಯ ಅರವಿಂದ ರಾಯ್ಕರ್ ಚುನಾವಣೆಯಲ್ಲಿ ಪಾಲ್ಗೊಳ್ಳದೆ ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದರು. ಪಕ್ಷೇತರ ಸದಸ್ಯ ಸತೀಶ್ ಬಿಜೆಪಿಗೆ ಬೆಂಬಲ ನೀಡಿದರೆ, ಸಂಸದ ಬಿ.ವೈ.ರಾಘವೇಂದ್ರ ಅವರ ಮತ ಸೇರಿ ಒಟ್ಟು ೧೭ ಮತ ಪಡೆದು ಬಿಜೆಪಿಗೆ ಅಧಿಕಾರ ದೊರೆಯಿತು.ರಣತಂತ್ರದಲ್ಲಿ ಸೋತ ಕಾಂಗ್ರೆಸ್ : ಕಾರ್ಗಲ್, ಹೊಸನಗರ ಪಟ್ಟಣ ಪಂಚಾಯ್ತಿ ಮಾದರಿಯಲ್ಲಿ ಕಡಿಮೆ ಸದಸ್ಯರನ್ನು ಹೊಂದಿದ್ದರೂ ತಂತ್ರಗಾರಿಕೆಯ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್ ಪಕ್ಷ ಸಾಗರ ನಗರಸಭೆಯಲ್ಲಿ ಸಹ ಅದೇ ತಂತ್ರಗಾರಿಕೆ ಉಪಯೋಗಿಸಿತ್ತಾದರೂ ಅದಕ್ಕೆ ಯಶಸ್ಸು ಸಿಗಲಿಲ್ಲ. ೧೦ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷ ಬಿಜೆಪಿಯ ಓರ್ವ ಸದಸ್ಯನ ಮತ ಪಡೆದು, ಇನ್ನೋರ್ವನನ್ನು ಗೈರಾಗಿಸಿ, ಪಕ್ಷೇತರವಾಗಿ ಜಯಗಳಿಸಿದ್ದ ಕುಸುಮ ಸುಬ್ಬಣ್ಣ, ಉಷಾ ಗುರುಮೂರ್ತಿ, ನಾದಿರಾ ಪರ್ವಿನ್ ಅವರ ಮತ ಪಡೆದರೂ ಗೆಲುವಿನ ಸಮೀಪ ತಲುಪಲು ಆಗದೆ ವಿಫಲವಾಯಿತು. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ರಣತಂತ್ರ ಇಲ್ಲಿ ವರ್ಕೌಟ್ ಆಗಲಿಲ್ಲ. ಉತ್ತಮ ಆಡಳಿತದ ಭರವಸೆ : ನೂತನ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು ಮಾತನಾಡಿ, ಪಕ್ಷದ ಎಲ್ಲರ ಸಹಕಾರ, ಸಂಸದರು, ಮಾಜಿ ಸಚಿವರು ಹಾಗೂ ಎಲ್ಲ ಪ್ರಮುಖರ ಸಹಕಾರದಿಂದ ಅಧಿಕಾರಕ್ಕೆ ಬಂದಿದ್ದೇವೆ. ಸಂಸದರು, ಶಾಸಕರು ಮತ್ತು ಎಲ್ಲಾ ಸದಸ್ಯರ ಬೆಂಬಲ ಪಡೆದು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಜನರ-ಸದಸ್ಯರ ಬೆಂಬಲ ಸಿಕ್ಕಿದೆ ಗೆಲುವಿನ ಕುರಿತು ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಾಜಿ ಸಚಿವ ಎಚ್.ಹಾಲಪ್ಪ, ಟಿ.ಡಿ.ಮೇಘರಾಜ್ ಇನ್ನಿತರರ ಸಹಕಾರದಿಂದ ನಗರಸಭೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿದಿದೆ. ಜಿಲ್ಲೆಯಲ್ಲಿ ಸಾಗರ ಎರಡನೇ ಉಪವಿಭಾಗೀಯ ಕೇಂದ್ರವಾಗಿದ್ದು, ಕೆಲಸ ಮಾಡಲು ಉತ್ತಮ ಅವಕಾಶವಿದೆ. ೧೭ ಸದಸ್ಯ ಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿದಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಊರಿನ ಅಭಿವೃದ್ಧಿ ಗೆ ಶ್ರಮಿಸಲು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಕಿವಿಮಾತು ಹೇಳಲಾಗಿದೆ ಎಂದರು.ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ನಾವು ಕಡಿಮೆ ಸದಸ್ಯ ಬಲ ಹೊಂದಿದ್ದರೂ ಪಕ್ಷೇತರರ ಸಹಕಾರದಿಂದ ನಗರಸಭೆ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿದ್ದೇವೆ. ಆದರೆ ಕೊನೆ ಕ್ಷಣದಲ್ಲಿ ನಮಗೆ ಹಿನ್ನಡೆಯಾಗಿದೆ. ಸೋಲಿನ ಭೀತಿಯಿಂದ ಸಂಸದರು ಎಲ್ಲ ಸದಸ್ಯರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು. ಮತದಾನ ಕೇಂದ್ರಕ್ಕೆ ಬರುವ ಸಂದರ್ಭದಲ್ಲಿ ಪೊಲೀಸರ ಜೊತೆ ದಬ್ಬಾಳಿಕೆಯಿಂದ ನಡೆದುಕೊಂಡಿದ್ದಾರೆ. ಸಂಸದರಾಗಿ ಇಂತಹ ವರ್ತನೆಯನ್ನು ತಿದ್ದಿಕೊಳ್ಳಬೇಕು. ನಗರಸಭೆಗೆ ಇನ್ನು ೮ ತಿಂಗಳ ಅವಧಿ ಇದೆ. ಸರ್ಕಾರ ನಮ್ಮದಿದೆ. ಆಡಳಿತಕ್ಕೆ ಎಲ್ಲ ರೀತಿ ಸಹಕಾರ ನೀಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಾಗುತ್ತದೆ ಎಂದರು.