ರಸಗೊಬ್ಬರ ಕಾರ್ಖಾನೆಯಾಗಿದ್ದರೂ ಈಗ ಅಲ್ಲಿ ಕೆಮಿಕಲ್ ತಯಾರು ಮಾಡುತ್ತಿದ್ದಾರೆ.
ಸೋಮರಡ್ಡಿ ಅಳವಂಡಿ ಕೊಪ್ಪಳ
ತಾಲೂಕಿನ ಹಾಲವರ್ತಿ ಗ್ರಾಮದ ಬಳಿ ಇರುವ ರಸಗೊಬ್ಬರ ಉತ್ಪಾದಿಸುವ ಕಾರ್ಖಾನೆಯೊಂದು ಹೊರಸೂಸುವ ತ್ಯಾಜ್ಯದಿಂದ ಅದರ ಪಕ್ಕದಲ್ಲಿಯೇ ಇರುವ ರೈತನೋರ್ವ ಬೆಳೆದ ಮೆಕ್ಕೆಜೋಳ ಸಂಪೂರ್ಣ ಒಣಗಿ ರೈತನಿಗೆ ಲಕ್ಷಾಂತರ ನಷ್ಟವಾಗಿದೆ.ಹಾಲವರ್ತಿ ಗ್ರಾಮದ ಬಸವರಾಜ ಮೈನಳ್ಳಿ ಎನ್ನುವ ರೈತ ತಮ್ಮ ಹತ್ತು ಎಕರೆ ಹೊಲದಲ್ಲಿ ಹಾಕಿದ್ದ ಮೆಕ್ಕೆಜೋಳವೆಲ್ಲ ಒಣಗಿ ಹೋಗಿದೆ. ಅಗತ್ಯ ನೀರು ಹಾಯಿಸಿದರೂ ಬೆಳೆ ಒಣಗಿದ್ದು, ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ.
ರಸಗೊಬ್ಬರ ಕಾರ್ಖಾನೆಯಾಗಿದ್ದರೂ ಈಗ ಅಲ್ಲಿ ಕೆಮಿಕಲ್ ತಯಾರು ಮಾಡುತ್ತಿದ್ದಾರೆ. ರಾತ್ರಿ ತ್ಯಾಜ್ಯ ಹೊರಬಿಡುವ ವೇಳೆಯಲ್ಲಿ ಬಾಯ್ಲರ್‌ನಿಂದ ಹೊರಬರುವ ಆ್ಯಸಿಡ್ ಕರಿಬೂದಿ ರೈತರ ಬೆಳೆಗಳ ಮೇಲೆ ಬೀಳುತ್ತಿದೆ.ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ ಪ್ರಶ್ನೆ ಮಾಡಿದರೆ ಕಂಪೆನಿ ಅಧಿಕಾರಿಗಳು ನಿಮಗೆ ಪರಿಹಾರ ಕೊಡುತ್ತೇವೆ, ತೆಗೆದುಕೊಂಡು ಹೋಗಿ, ನಿಮ್ಮ ಭೂಮಿಯನ್ನೇ ನಮಗೆ ಗುತ್ತಿಗೆ ನೀಡಿ ಎಂದೆಲ್ಲ ಕೇಳುತ್ತಾರೆಯೇ ಹೊರತು ಆ್ಯಸಿಡ್ ಮಿಶ್ರಿತ ಕರಿಬೂದಿ ಹೊರಸೂಸುವುದನ್ನು ತಡೆಯುವುದಾಗಿ ಹೇಳುವುದಿಲ್ಲ.
ಎಕರೆಗೆ ಹತ್ತಿಪ್ಪತ್ತು ಸಾವಿರ ಪರಿಹಾರ ನೀಡುತ್ತೇವೆ ಎಂದು ಹೇಳುತ್ತಾರೆ. ಈ ಪುಡಿಗಾಸು ಪರಿಹಾರ ನಮಗೆ ಬೇಡ, ನಮ್ಮ ಹೊಲಕ್ಕೆ ನಿಮ್ಮ ಆ್ಯಸಿಡ್ ಮಿಶ್ರಿತ ಕರಿಬೂದಿ ಹಾರದಂತೆ ಕಟ್ಟುನಿಟ್ಟಿನ ಕ್ರಮವಹಿಸಿ ಎಂದು ಕೇಳಿದರೆ ರೈತರಿಗೆ ಬೆದರಿಕೆ ಹಾಕುತ್ತಾರಂತೆ. ಈ ನಡುವೆ ಪರಿಸರ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೆ ಅವರು ಸಹ ಸ್ಪಂದಿಸುತ್ತಿಲ್ಲ. ಬದಲಾಗಿ ಅವರು ನಮ್ಮ ಹೊಲಕ್ಕೆ ಬರುವ ಮುನ್ನ ಕಾರ್ಖಾನೆಗೆ ಭೇಟಿ ನೀಡುತ್ತಾರೆ. ಯಾವುದೇ ಆ್ಯಸಿಡ್ ಮಿಶ್ರಿತ ಕರಿಬೂದಿ ಹಾರಿ ಬರುತ್ತಿಲ್ಲವಲ್ಲ ಎಂದು ಕಾರ್ಖಾನೆಯ ಪರವಾಗಿ ಅಧಿಕಾರಿಗಳು ವಾದ ಮಾಡುತ್ತಾರೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.ಮೊದಲು ಪರ್ಟಿಲೈಸರ್ ಉತ್ಪಾದನೆ ಮಾಡುತ್ತಿದ್ದ ಕಾರ್ಖಾನೆ ಈಗ ಕೆಮಿಕಲ್ ಉತ್ಪಾದನೆ ಪ್ರಾರಂಭಿಸಿದ್ದು, ಇದು ಅತ್ಯಂತ ಅಪಾಯಕಾರಿಯಾಗಿದೆ. ಅಷ್ಟೇ ಅಲ್ಲ, ಕಾರ್ಖಾನೆ ತ್ಯಾಜ್ಯದ ನೀರನ್ನು ಸಹ ಕಾರ್ಖಾನೆಯ ಆವರಣದಲ್ಲಿ ಬೋರವೆಲ್ ಹಾಕಿ ಅದರಲ್ಲಿ ಬಿಡುತ್ತಿದ್ದಾರೆ. ಅದು ಅಂತರ್ಜಲ ಸೇರುತ್ತಿದೆ. ಇದರಿಂದ ನಮ್ಮ ಹೊಲದಲ್ಲಿನ ಬೋರವೆಲ್ ನೀರು ಸಹ ಕುಡಿಯದಂತಾಗಿವೆ.
ಕಾರ್ಖಾನೆಯ ತ್ಯಾಜ್ಯ ಹಾರಿ ಬರುತ್ತಿರುವುದರಿಂದ ಹೊಲದಲ್ಲಿ ಕೆಲಸ ಮಾಡಲು ಕೂಲಿಯಾಳು ಸಹ ಬರುತ್ತಿಲ್ಲ. ಹೀಗಾಗಿ, ನಮ್ಮ ಮನೆಯವರೇ ಹೊಲದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೂ ಹೇಗೋ ಕಷ್ಟಪಟ್ಟು ಬಿತ್ತನೆ ಮಾಡಿದರೂ ಅದು ತೆನೆ ಬಿಡುವ ಮುನ್ನವೇ ಒಣಗಿ ಹೋಗುತ್ತದೆ. ಇಲ್ಲಿ ಬೆಳೆದಿದ್ದ ಮೇವನ್ನು ಸಹ ಜಾನುವಾರಗಳು ತಿನ್ನುವುದಿಲ್ಲ ಎನ್ನುತ್ತಾರೆ ರೈತರು.ನಮ್ಮ ಪಾಡು ಯಾರಿಗೆ ಹೇಳೋಣ ಹೇಳಿ. ಹತ್ತು ಎಕರೆ ನೀರಾವರಿ ಭೂಮಿಯಿದ್ದರೂ ನಯಾಪೈಸೆ ಆದಾಯ ಬರದಂತಾಗಿದೆ. ಹಾಕಿದ ಮೆಕ್ಕೆಜೋಳ ಕಾರ್ಖಾನೆ ತ್ಯಾಜ್ಯದಿಂದ ಸಂಪೂರ್ಣ ಒಣಗಿ ಹೋಗುತ್ತಿದೆ ಎಂದು ಹಾಲವರ್ತಿ ರೈತ ಬಸವರಾಜ ಮೈನಳ್ಳಿ ತಿಳಿಸಿದ್ದಾರೆ.