ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮೆಕ್ಕೆಜೋಳ ಖರೀದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಾಲ್ ಹಾಗೂ ಗರಿಷ್ಠ 50 ಕ್ವಿಂಟಾಲ್‌ನಂತೆ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಲ್‌ಗೆ 2400 ರು.ನಂತೆ ಖರೀದಿಸಲಾಗುವುದು. ಮೆಕ್ಕೆಜೋಳ ಖರೀದಿದಾರರು ಡಿಸ್ಟಿಲರಿ ಮಾಲೀಕರಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಗೆ ಎನ್‌ಇಎಂಎಲ್ (ಓಇಒಐ) ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಪ್ರೂಟ್ಸ್ ಪೊರ್ಟಲ್ ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ರೈತರ ನೊಂದಣಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿಯನ್ನು ಹೊಂದಲಾಗಿದೆ. ರೈತರು ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು. ಸಹಕಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನೀಡಬೇಕು. ಮೆಕ್ಕೆಜೋಳ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಸಹಕಾರ ಇಲಾಖೆ ಉಪನಿಬಂಧಕ ಮಧು ಶ್ರೀನಿವಾಸ, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್ , ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಘವೇಂದ್ರ ಪ್ರಸಾದ್ ಇತರರು ಹಾಜರಿದ್ದರು.