ಬ್ಯಾಡಗಿ ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರದ ಆವರಣದಲ್ಲಿ ಗೋವಿನ ಜೋಳದ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು.
ಬ್ಯಾಡಗಿ: ಜಿಲ್ಲೆಯ ವಿವಿಧೆಡೆಗಳಲ್ಲಿ ಸರ್ಕಾರದ ಗೋವಿನ ಜೋಳದ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ರೈತರು ತಮ್ಮ ಬೆಳೆಯನ್ನು ಇಲ್ಲಿ ಮಾರಾಟ ಮಾಡುವ ಮೂಲಕ ನಿಗದಿಪಡಿಸಿದ ಬೆಲೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರದ ಆವರಣದಲ್ಲಿ ಗೋವಿನ ಜೋಳದ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಾವೇರಿ ಜಿಲ್ಲೆಯಾದ್ಯಂತ ಪ್ರಮುಖ ಬೆಳೆಯಾಗಿರುವ ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸುವಂತೆ ರೈತ ಸಂಘಟನೆಗಳು ಸೇರಿದಂತೆ ರೈತ ಸಮುದಾಯ ಹಲವು ದಿನಗಳಿಂದ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಖರೀದಿ ಕೇಂದ್ರ ಆರಂಭಿಸಲಾಗಿದೆ. ಪ್ರತಿಯೊಬ್ಬ ರೈತ ತಮ್ಮ ಜಮೀನಿನ ಆಧಾರದ ಮೇಲೆ ಎಕರೆಗೆ 12 ಕ್ವಿಂಟಲ್‌ನಂತೆ ಒಟ್ಟು 50 ಕ್ವಿಂಟಲ್ ವರೆಗೂ ಮಾರಾಟ ಮಾಡಬಹುದಾಗಿದೆ. ಸರ್ಕಾರ ನಿಗದಿಪಡಿಸಿದ ₹2400ರಂತೆ ಕೇಂದ್ರದಲ್ಲಿ ಮಾರಲು ಅವಕಾಶವಿದೆ. ಇದಕ್ಕಾಗಿ ಟೆಂಡರ್ ಕರೆದಿದ್ದು, ಆಯ್ದ ಖರೀದಿದಾರರು ನಿಗದಿಪಡಿಸಿದ ಉತ್ಪನ್ನವನ್ನು ರೈತರಿಂದ ಪಡೆದು ಹಣ ಸಂದಾಯಿಸಲಿದ್ದಾರೆ. ರೈತರು ಆಧಾರ್ ಕಾರ್ಡ್ ಮೂಲಕ ಹೆಸರು ನೋಂದಾಯಿಸಿದಲ್ಲಿ ಖರೀದಿಯ ಬಳಿಕ ಅವರ ಖಾತೆಗೆ ಹಣ ಜಮೆಯಾಗಲಿದೆ ಎಂದರು.
ನೂಕುನುಗ್ಗಲು ಬೇಡ: ಡಿ. 15ರಿಂದ ಬ್ಯಾಡಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರಿ ಸಂಘದಲ್ಲಿ ಖರೀದಿ ಕೇಂದ್ರ ಆರಂಭಿಸಿದ್ದು, ಈ ವರೆಗೂ ರೈತರು ಗೋವಿನ ಜೋಳ ತಂದಿರಲಿಲ್ಲ. ಈಗ ಎರಡು ದಿನಗಳಿಂದ ರೈತರು ಆಗಮಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನೂಕುನುಗ್ಗಲು ಉಂಟುಮಾಡದೆ, ನಿಗದಿತ ಸಮಯದಲ್ಲಿ ಆಧಾರ್ ಕಾರ್ಡ್ ನೋಂದಾಯಿಸಿ, ರಸೀದಿ ಪಡೆದು ಗೋವಿನ ಜೋಳ ಕೇಂದ್ರದಲ್ಲಿ ಮಾರಾಟ ಮಾಡಬೇಕು. ರೈತರು ಚೀಲಗಳು ಬರುತ್ತಿದ್ದಂತೆ ಟೆಂಡರ್ ಪಡೆದ ಖರೀದಿದಾರರು ಅವುಗಳನ್ನು ತಮ್ಮ ವಾಹನಗಳಲ್ಲಿ ತೂಕ ಮಾಡಿದ ಬಳಿಕ ಹೇರಿಕೊಂಡು ತೆರಳುತ್ತಾರೆ. ಬಳಿಕ ರೈತರ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಸಹಕಾರಿ ಸಂಘದ ವ್ಯವಸ್ಥಾಪಕರು ತಿಳಿಸಿದ್ದಾರೆ.ಈ ವೇಳೆ ತಹಸೀಲ್ದಾರ್ ಚಂದ್ರಶೇಖರ ನಾಯಕ, ಎಪಿಎಂಸಿ ಕಾರ್ಯದರ್ಶಿ ಡಿ.ಬಿ. ಆದರ್ಶ, ಗ್ರಾಮ ಆಡಳಿತಾಧಿಕಾರಿ ಶ್ರುತಿ ಮೈದೂರು, ಟಿಎಪಿಸಿಎಂಎಸ್ ವ್ಯವಸ್ಥಾಪಕ ಪ್ರಭುಲಿಂಗ ಬಣಕಾರ, ಗುಡ್ಡಪ್ಪ ಬಸನಗೌಡ್ರ, ಯು.ಸಿ. ದಾನಮ್ಮನವರ, ವಿನಾಯಕ ಪೂಜಾರ, ಚೇತನ ತೆವರಿ ಇದ್ದರು.