ಸರ್ಕಾರ ರೈತರ ಮೆಕ್ಕೆಜೋಳ ಖರೀದಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಿ ನೋಂದಣಿ ಮಾಡಿರುವ ರೈತರ ಮೆಕ್ಕೆಜೋಳವನ್ನು ಖರೀದಿ ಮಾಡಿಕೊಳ್ಳಬೇಕು ಹಾಗೂ ಮತ್ತೆ ನೋಂದಣಿ ಪ್ರಕ್ರಿಯೆ ಆರಂಭಿಸಿ ಉಳಿದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಲಕ್ಷ್ಮೇಶ್ವರದ ರೈತ ಬಸವರಾಜ ಮೆಣಸಿನಕಾಯಿ ಹಾಗೂ ಗೊಜನೂರ ಗ್ರಾಮದ ಮಹಾಂತಗೌಡ ಪಾಟೀಲ ಆಗ್ರಹಿಸಿದ್ದಾರೆ.

ಲಕ್ಷ್ಮೇಶ್ವರ: ಸರ್ಕಾರ ತರಾತುರಿಯಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಮೆಕ್ಕೆಜೋಳ ಖರೀದಿಗೆ ಅನುಮತಿ ನೀಡಿ ಕೈತೊಳೆದುಕೊಂಡು ಬಿಟ್ಟಿದೆ. ರೈತರ ಹಾಗೂ ವಿರೋಧ ಪಕ್ಷಗಳ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಮೆಕ್ಕೆಜೋಳ ಖರೀದಿಸುವ ನಾಟಕ ಮಾಡುತ್ತಿರುವುದು ರೈತರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಆಮೆಗತಿಯಲ್ಲಿ ನಡೆದಿರುವುದು ರೈತರಿಗೆ ತಲೆನೋವು ತಂದಿದೆ. ಪಟ್ಟಣದ ಟಿಎಪಿಎಂಎಸ್‌ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಎಥೆನಾಲ್ ಕಂಪನಿಯ ವತಿಯಿಂದ ಕಳೆದ 3- 4 ದಿನಗಳಿಂದ ಖರೀದಿ ಆರಂಭವಾಗಿದ್ದರೂ ಕೇವಲ 39 ರೈತರಿಂದ 137 ಟನ್ ಮೆಕ್ಕೆಜೋಳ ಮಾತ್ರ ಖರೀದಿಸಲಾಗಿದೆ.

ಕಳೆದ 2 ದಿನಗಳಿಂದ ರೈತರು ಟ್ರ್ಯಾಕ್ಟರ್‌ಗಳಲ್ಲಿ ಮೆಕ್ಕೆಜೋಳ ಹೇರಿಕೊಂಡು ಮಾರಾಟಕ್ಕೆ ತಂದು ನಿಲ್ಲಿಸಿದ್ದಾರೆ. ಆದರೆ ಬುಧವಾರ ಖರೀದಿ ಮಾಡಿದ ಮೆಕ್ಕೆಜೋಳದ ಬಿಲ್ಲನ್ನು ಕಂಪ್ಯೂಟರ್‌ಗಳಲ್ಲಿ ಎಂಟ್ರಿ ಮಾಡಲು ಹೋದರೆ ಅದು ಎಕ್ಸಿಟೆಡ್ ಎಂದು ತೋರಿಸುತ್ತಿರುವುದರಿಂದ ಗುರುವಾರ ಮಧ್ಯಾಹ್ನದವರೆಗೆ ಮೆಕ್ಕೆಜೋಳ ಖರೀದಿ ನಿಲ್ಲಿಸಿದ್ದರಿಂದ ರೈತರಲ್ಲಿ ಗೊದಲ ಉಂಟಾಗಿದೆ.

ತಾಲೂಕಿನಲ್ಲಿ ಸುಮಾರು 1668 ರೈತರು ಮೆಕ್ಕೆಜೋಳ ಮಾರಾಟಕ್ಕೆ ನೋಂದಣಿ ಮಾಡಿದ್ದಾರೆ. ಇದರಲ್ಲಿ ಎಥೆನಾಲ್ ಕಂಪನಿಯು 248, ಕೆಎಂಎಫ್‌ 770 ಹಾಗೂ ಫೌಲ್ಟ್ರೀ- 651 ರೈತರು ನೋಂದಣಿ ಮಾಡಿಸಿದ್ದಾರೆ. ಕೆಎಂಎಫ್‌ನವರು ರೈತರು ಮೆಕ್ಕೆಜೋಳವನ್ನು ಧಾರವಾಡಕ್ಕೆ ತಂದು ಕೊಡಬೇಕು ಎಂದು ನಿಯಮ ವಿಧಿಸಿದ್ದಾರೆ ಎನ್ನುವ ಗೊಂದಲ ರೈತರಲ್ಲಿದೆ.

ರೈತರು ಕೆಎಂಎಫ್‌ನವರು ಲಕ್ಷ್ಮೇಶ್ವರದ ಟಿಎಪಿಎಂಎಸ್‌ನಲ್ಲಿಯೇ ತೆಗೆದುಕೊಂಡು ಹೋಗಬೇಕು ಎನ್ನುವ ಆಗ್ರಹವಾಗಿದೆ. ಅಲ್ಲದೆ ಫೌಲ್ಟ್ರೀ ಫಾರಂನವರು ಇದುವರೆಗೂ ಖರೀದಿ ಆರಂಭಿಸಿಲ್ಲವಾಗಿದ್ದರಿಂದ ರೈತರು ಗೊಂದಲದಲ್ಲಿಯೇ ಕಾಲ ಕಳೆಯುವಂತಾಗಿದೆ.

ಸರ್ಕಾರ ರೈತರ ಮೆಕ್ಕೆಜೋಳ ಖರೀದಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಿ ನೋಂದಣಿ ಮಾಡಿರುವ ರೈತರ ಮೆಕ್ಕೆಜೋಳವನ್ನು ಖರೀದಿ ಮಾಡಿಕೊಳ್ಳಬೇಕು ಹಾಗೂ ಮತ್ತೆ ನೋಂದಣಿ ಪ್ರಕ್ರಿಯೆ ಆರಂಭಿಸಿ ಉಳಿದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಲಕ್ಷ್ಮೇಶ್ವರದ ರೈತ ಬಸವರಾಜ ಮೆಣಸಿನಕಾಯಿ ಹಾಗೂ ಗೊಜನೂರ ಗ್ರಾಮದ ಮಹಾಂತಗೌಡ ಪಾಟೀಲ ಆಗ್ರಹಿಸಿದ್ದಾರೆ.

ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಿ

ಸರ್ಕಾರ ತರಾತುರಿಯಲ್ಲಿ ಮೆಕ್ಕೆಜೋಳ ಖರೀದಿಗೆ ಅನುಮತಿ ನೀಡಿದ್ದರಿಂದ ಗೊಂದಲ ಉಂಟಾಗಿದೆ. ಸರ್ಕಾರ ಯಾವ ಯಾವ ಕಂಪನಿಗಳು ಎಷ್ಟು ಮೆಕ್ಕೆ ಜೋಳ ಖರೀದಿಸಬೇಕು. ಯಾವ ಜಿಲ್ಲೆಯಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಯಾವ ಕಂಪನಿಗಳು ಎಷ್ಟು ಪ್ರಮಾಣದ ಮೆಕ್ಕೆಜೋಳ ಖರೀದಿಸಬೇಕು ಎನ್ನುವ ಸ್ಪಷ್ಟವಾದ ಮಾಹಿತಿ ನೀಡದಿರುವುದು ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. ಸಾಫ್ಟ್‌ವೇರ್‌ನಲ್ಲಿ ಹಲವು ದೋಷಗಳು ಇರುವುದರಿಂದ ರೈತರ ನೋಂದಣಿ ಹಾಗೂ ಖರೀದಿ ವಿಳಂಬವಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೆ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಿ ಸರಳ ರೀತಿಯಲ್ಲಿ ಖರೀದಿ ಮಾಡುವಂತೆ ಲಕ್ಷ್ಮೇಶ್ವರ ಟಿಎಪಿಎಂಎಸ್ ಅಧ್ಯಕ್ಷ ಸೋಮಣ್ಣ ಉಪನಾಳ ಆಗ್ರಹಿಸಿದ್ದಾರೆ.