ಖರೀದಿ ಕೇಂದ್ರಗಳ ಆದೇಶಗಳು ಕಳೆದ ಹತ್ತು ದಿನಗಳಿಂದ ಕಾಯುತ್ತಿರುವ ರೈತರಿಗೆ ಭರವಸೆಯೊಂದೆ ಹೊರತು ಕೇಂದ್ರ ಪ್ರಾರಂಭವಾಗಲೆ ಇಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ರೈತರ ಮೂಗಿಗೆ ತುಪ್ಪ ಒರೆಸಿದರಾ ಎಂಬ ಅನುಮಾನ ಭುಗಿಲೆದ್ದಿದೆ.

ವಿಶೇಷ ವರದಿ

ಮುಳಗುಂದ: ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ, ರೈತರು ಪ್ರತಿಯೊಂದು ಪಡೆಯಬೇಕಾದರೆ ಹೋರಾಟ ಅನಿವಾರ್ಯವಾಗಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಕಳೆದ ತಿಂಗಳಿಂದಲೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಹೋರಾಟಕ್ಕಿಳಿದ ರೈತರಿಗೆ ಇಂದಿಗೂ ಫಲ ಸಿಕ್ಕಿಲ್ಲ.

ಖರೀದಿ ಕೇಂದ್ರಗಳ ಆದೇಶಗಳು ಕಳೆದ ಹತ್ತು ದಿನಗಳಿಂದ ಕಾಯುತ್ತಿರುವ ರೈತರಿಗೆ ಭರವಸೆಯೊಂದೆ ಹೊರತು ಕೇಂದ್ರ ಪ್ರಾರಂಭವಾಗಲೆ ಇಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ರೈತರ ಮೂಗಿಗೆ ತುಪ್ಪ ಒರೆಸಿದರಾ ಎಂಬ ಅನುಮಾನ ಭುಗಿಲೆದ್ದಿದೆ. ಜಿಲ್ಲಾದ್ಯಂತ ಹೋರಾಟ: ಮೆಕ್ಕೆಜೋಳ ಖರೀದಿಸುವಂತೆ ಜಿಲ್ಲಾದ್ಯಂತ ರೈತರು ಹೋರಾಟಕ್ಕಿಳಿದರು. ಲಕ್ಷ್ಮೇಶ್ವರದಲ್ಲಿಯಂತೂ ಉಪವಾಸ ಸತ್ಯಾಗ್ರಹ ಮಾಡಿ ಹೋರಾಟಕ್ಕೆ ಬೆಲೆ ಸಿಕ್ಕಿತು ಎಂಬ ಆಶ್ವಾಸನೆಯೊಂದಿಗೆ ಹೋರಾಟ ಹಿಂಪಡೆಯಲಾಯಿತು. ಆದರೆ ಇದರಿಂದ ಸರ್ಕಾರದಿಂದ ಸಿಕ್ಕ ಆಶ್ವಾಸನೆ ಮಾತ್ರ ಉಳಿಯಿತು. ಖರೀದಿ ಪ್ರಕ್ರಿಯೆ ನಡೆಯಲೇ ಇಲ್ಲ. ಇಂದಿಗೂ ಮುಂದುವರಿದ ಆಶ್ವಾಸನೆಗಳು ಖಾತೆಯೊಂದಕ್ಕೆ ಮೊದಲು 5 ಕ್ವಿಂಟಲ್, ನಂತರ 10ರಿಂದ 12 ಕ್ವಿಂ, 25 ಕ್ವಿಂಟಲ್, ಕೊನೆಗೆ 50 ಕ್ವಿಂಟಲ್ ಖರೀದಿಸಲಾಗುವುದು ಎಂಬ ಆದೇಶ ಪ್ರತಿಗಳು ಹರಿದಾಡಿದವು. ಆದರೆ ಹತ್ತು ದಿನ ಕಳೆದರೂ ಒಂದು ಕೆಜಿ ಖರೀದಿ ಮಾಡಲೇ ಇಲ್ಲ. ಖರೀದಿ ಕೇಂದ್ರ: ಲಕ್ಷ್ಮೇಶ್ವರ, ಮಲ್ಲಸಮುದ್ರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲು ಜಿಲ್ಲಾಧಿಕಾರಿ ಸೂಚಿಸಿದರು. ನಂತರ ಹೊರಡಿಸಿದ ಆದೇಶದ ಪ್ರಕಾರ ಲಕ್ಷ್ಮೇಶ್ವರ, ಮುಳಗುಂದ, ಶಿರಹಟ್ಟಿ, ಮುಂಡರಗಿ, ಪೇಠಾಲೂರು, ನರಗುಂದ, ಕೊಣ್ಣೂರು, ರೋಣ, ಗದಗ, ಸೂಡಿ, ನರೇಗಲ್ಲ, ಹೊಳೆಆಲೂರಗಳಲ್ಲಿ ತೆರೆಯುವಂತೆ ಆದೇಶಿಸಿ ಹೊರಡಿಸಿದ ಪತ್ರ ಎಲ್ಲ ಕಡೆಗೆ ಹರಿದಾಡುತ್ತಿದೆ. ಸಹಕಾರ ಸಂಘದಲ್ಲಿ ವಿಚಾರಿಸಿದರೆ ನಮಗೇನು ಆದೇಶ ಬಂದಿಲ್ಲ, ಇದರ ಬಗ್ಗೆ ನಮಗೆ ಗೊತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗಾದರೆ ರೈತರು ಗೊಂದಲದಲ್ಲಿ ಸಿಲುಕಿದ್ದು, ಈ ಬಗ್ಗೆ ನಿಜ ಮಾಹಿತಿ ದೊರಕುವುದಾದರೂ ಎಲ್ಲಿ ಎಂಬುದು ತಿಳಿಯದಾಗಿದೆ.ನೊಂದಣಿ ಹೇಗೆ?: ನೋಂದಣಿ ಬಗ್ಗೆ ಹೇಳುವುದಾದರೆ ಈವರೆಗೂ ಮೂರು ದಿನ ನೋಂದಣಿ ಪ್ರಕ್ರಿಯೆ ನಡೆಸಿ ನಂತರ ನಮಗೆ ಬೇಕಾದ ಮೆಕ್ಕೆಜೋಳದ ಟಾರ್ಗೆಟ್ ಮುಗಿಯಿತು ಎಂದು ಬಂದ್ ಮಾಡಲಾಯಿತು. ಆದರೆ ರೈತರ ಮೆಕ್ಕೆಜೋಳ ಕಣದಲ್ಲಿಯೇ ಹುಳು ಹಿಡಿಯುವಂತಾಗಿದೆ.

ಉಗ್ರ ಹೋರಾಟದ ಎಚ್ಚರಿಕೆ: ಅಧಿಕಾರಿಗಳು ಹಾಗೂ ರಾಜಕಾರಣಿಗಳು ದಿನಕ್ಕೊಂದು ದ್ವಂದ್ವ ಹೇಳಿಕೆ ನೀಡುತ್ತಾ ರೈತರ ತಾಳ್ಮೆ ಪರೀಕ್ಷಿಸುವಂತಾಗಿದೆ. ಕಳೆದ 15 ದಿನಗಳಿಂದ ಕೊಟ್ಟ ಹೇಳಿಕೆ ಇವರಿಗೆ ನೆನಪೇ ಉಳಿದಿಲ್ಲ. ರೈತ ಬೆಳೆಯುವುದೇ ತಪ್ಪೇ ಎನ್ನುವಂತಾಗಿದೆ. ರೈತ ಬೆಳೆದ ಪ್ರತಿಯೊಂದು ಬೆಳೆಗೂ ಹೋರಾಟ ಮಾಡಿಯೇ ಮಾರಾಟ ಮಾಡುವುದಾದರೆ ಬೆಳೆ ಬೆಳೆಯುವುದನ್ನೇ ನಿಲ್ಲಿಸಬೇಕಾಗುತ್ತದೆ. ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸದಿದ್ದರೆ ರೈತರೆಲ್ಲ ಉಗ್ರ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ರೈತ ಸಂಘ ಮುಳಗುಂದ ಘಟಕದ ಅಧ್ಯಕ್ಷ ದೇವರಾಜ ಸಂಗನಪೇಟಿ ಎಚ್ಚರಿಸಿದ್ದಾರೆ.

ಪ್ರಮಾಣ ನಿಗದಿಯಾಗಿಲ್ಲ: ಖರೀದಿ ಪ್ರಕ್ರಿಯೆಗೆ ಕೆಎಂಎಫ್, ಫೆಡರೇಶನ್ ಹಾಗೂ ಟಿಎಪಿಎಂಸಿಯವರು ಮುಂದೆ ಬರಬೇಕಿದೆ. ಅಲ್ಲದೇ ನಮಗೆ ಖಾತೆಯೊಂದಕ್ಕೆ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲು ಮಾಹಿತಿ ಬಂದಿಲ್ಲ. ಅದರ ಪ್ರಮಾಣ ಸರ್ಕಾರದಿಂದ ನಿಗದಿಯಾಗಿಲ್ಲ. 1950 ರೈತರ ನೋಂದಣಿ ಪ್ರಕ್ರಿಯೆ ಮುಗಿದಿದೆ. ಮುಂದಿನ ಮಾಹಿತಿ ಆಧರಿಸಿ ಖರೀದಿ ಕೇಂದ್ರದ ಬಗ್ಗೆ ಮಾತನಾಡುತ್ತೇನೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಯ್ಯ ಕೆ. ತಿಳಿಸಿದರು.