ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮೆಕ್ಕೆ ಹೋರಾಟ ಶುರು

| Published : Nov 24 2025, 01:30 AM IST

ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮೆಕ್ಕೆ ಹೋರಾಟ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಮೆಕ್ಕೆಜೋಳ‍ವನ್ನು ಬೆಂಬಲ ಬೆಲೆಯಡಿ ಖರೀದಿಸುವುದು ಹಾಗೂ ಶೀಘ್ರ ಖರೀದಿ ಕೇಂದ್ರ ಸ್ಥಾಪಿಸಲು ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮಧ್ಯ ಕರ್ನಾಟಕದ ದಾವಣಗೆರೆ ಮಹಾನಗರದಲ್ಲಿ ನ.25ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದ್ದಾರೆ.

- ಬೆಂಬಲ ಬೆಲೆಯಡಿ ಬೆಳೆ ಖರೀದಿಸಲು ಶೀಘ್ರ ಖರೀದಿ ಕೇಂದ್ರ ಆರಂಭಿಸಿ: ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರಪ್ಪ ಆಗ್ರಹ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೆಕ್ಕೆಜೋಳ‍ವನ್ನು ಬೆಂಬಲ ಬೆಲೆಯಡಿ ಖರೀದಿಸುವುದು ಹಾಗೂ ಶೀಘ್ರ ಖರೀದಿ ಕೇಂದ್ರ ಸ್ಥಾಪಿಸಲು ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮಧ್ಯ ಕರ್ನಾಟಕದ ದಾವಣಗೆರೆ ಮಹಾನಗರದಲ್ಲಿ ನ.25ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಎತ್ತಿನ ಗಾಡಿಗಳಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು, ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಸಮಾವೇಶ ನಡೆಸಿ, ಸರ್ಕಾರಕ್ಕೆ ಒತ್ತಾಯಿಲಾಗುವುದು ಎಂದರು.

ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪರವಾಗಿ ಹೋರಾಟ ನಡೆಸಿದ್ದ ಬಿ.ವೈ.ವಿಜಯೇಂದ್ರ ಇದೀಗ ಮಧ್ಯ ಕರ್ನಾಟಕದಲ್ಲಿ ಮೆಕ್ಕೆಜೋಳ ರೈತರ ಪರ ಹೋರಾಟ ನಡೆಸಲಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಿಂದ ರೈತರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದಾರೆ. ನ.27 ಮತ್ತು 28ರಂದು ರಾಜ್ಯಾದ್ಯಂತ ಬಿಜೆಪಿ ಮಂಡಳ ವ್ಯಾಪ್ತಿಯಲ್ಲಿ ಹೋರಾಟ ನಡೆಯಲಿದೆ. ಬಿ.ವೈ.ವಿಜಯೇಂದ್ರ ಹೋರಾಟ ದಾವಣಗೆರೆಯಿಂದಲೇ ಶುರುವಾಗಲಿದ್ದು, ಡಿ.1 ಮತ್ತು 2ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಯಾವುದೇ ಹೋರಾಟ ಆರಂಭವಾದರೂ ಯಶಸ್ವಿಯಾಗುತ್ತವೆ. ಈ ನಿಟ್ಟಿನಲ್ಲಿ ನ.25ರಂದು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಪಕ್ಷ ಹೋರಾಟವನ್ನು ಆರಂಭಿಸಲಿದೆ. ಇಲ್ಲಿ ಆರಂಭಗೊಳ್ಳುವ ಯಾವುದೇ ಹೋರಾಟವು ದಿಕ್ಸೂಚಿ ಆಗಿರುತ್ತವೆ ಎಂದರು.

ಹೊನ್ನಾಳಿಯಿಂದ ಆರಂಭವಾದ ಮೆಕ್ಕೆಜೋಳ ಹೋರಾಟ ದಿಕ್ಸೂಚಿಯಾಗಿ ಆರಂಭವಾಗಿದೆ. ನಮ್ಮ ಹೋರಾಟಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಕಾಟಾಚಾರಕ್ಕೆ ಸಭೆ ಮಾಡಿದ್ದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದತ್ತ ಮುಖ್ಯಮಂತ್ರಿ ಬೊಟ್ಟು ಮಾಡಿ ತೋರಿಸಿದ್ದಾರೆ. ಕೇಂದ್ರವು 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಆಮದು ಮಾಡಿಕೊಂಡಿದೆ ಎಂಬುದಾಗಿ ಹಸಿಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.

ಅಧಿಕಾರ ಬಿಟ್ಟು ಹೋಗಿ:

ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಷಿ ಗಮನಕ್ಕೆ ಬಾರದೇ ಮೆಕ್ಕೆಜೋಳ ಆಮದಾಗುತ್ತದಾ? ಕಬ್ಬಿಗೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕೆಲಸ ಸಿಎಂ ಮಾಡುತ್ತಾರೆ. ಹೀಗೆ ಕೇಂದ್ರದತ್ತ ಬೊಟ್ಟು ಮಾಡುವುದೇ ಆಗಿದ್ದರೆ ಅಧಿಕಾರದಲ್ಲಾದರೂ ಯಾಕಿದ್ದೀರಿ? ಅಧಿಕಾರ ಬಿಟ್ಟು ಹೋಗಿ. ರೈತರು ಸಂಕಷ್ಟದಲ್ಲಿದ್ದರೆ ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್‌ನವರೇ ಕಿತ್ತಾಟ ನಡೆಸಿದ್ದಾರೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹೇಗಾಗುತ್ತದೆ? ರೈತರು ಬೆಳೆದ ಸಂಪೂರ್ಣ ಮೆಕ್ಕೆಜೋಳ ಸರ್ಕಾರ ಖರೀದಿಸಲಿ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮಾಜಿ ಮೇಯರ್ ಬಿ.ಜಿ. ಅಜಯ ಕುಮಾರ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳ್, ಐರಣಿ ಅಣ್ಣೇಶ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಮುಖಂಡರಾದ ಚಂದ್ರಶೇಖರ ಪೂಜಾರ, ಎಚ್.ಪಿ.ವಿಶ್ವಾಸ, ಪಾಲಿಕೆ ಮಾಜಿ ವಿಪಕ್ಷ ನಾಯಕ ಡಿ.ಎಲ್.ಆರ್‌.ಶಿವಪ್ರಕಾಶ, ತಾರೇಶ ನಾಯ್ಕ ಇತರರು ಇದ್ದರು.

- - -

(ಕೋಟ್‌)

* ಕಾಂಗ್ರೆಸ್‌ ಸರ್ಕಾರ ಸತ್ತುಹೋಗಿದೆ: ರಾಜ್ಯದ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಮೆಕ್ಕೆಜೋಳ ಖರೀದಿ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆಯಾ? ಆವರ್ತ ನಿಧಿ ಬಿಡುಗಡೆ ಮಾಡಿ, ಪ್ರತಿ ಕ್ವಿಂ. ಮೆಕ್ಕೆಜೋಳಕ್ಕೆ ₹600 ಹೆಚ್ಚುವರಿ ನೀಡಬೇಕು. ಭತ್ತ ಖರೀದಿ ಕೇಂದ್ರವನ್ನು ಇನ್ನೂ ಆರಂಭಿಸಿಲ್ಲ. ತಕ್ಷಣ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಭತ್ತ ಖರೀದಿ ಕೇಂದ್ರವನ್ನೂ ಸ್ಥಾಪಿಸದೇ, ಬರಿ ನೋಂದಣಿಗೆ ಸೀಮಿತಗೊಳಿಸಿದೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುತ್ತಿದ್ದರು. ಈಗ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಶುರು ಮಾಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದ್ದು, ಇದೊಂದು ಜೀವಂತ ಶವ ಎಂದು ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

- - -

- 23ಕೆಡಿವಿಜಿ1, 2:

ದಾವಣಗೆರೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.