ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಅಧಿದೇವತೆ ಹಾಸನಾಂಬೆ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಆಯೋಜನೆಯಲ್ಲಿ ಜಿಲ್ಲಾಡಳಿತದಿಂದ ಪಾರದರ್ಶಕ ಕೆಲಸ ನಡೆಯುತ್ತಿಲ್ಲ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ನಿಯಮದಂತೆ ತಹಸೀಲ್ದಾರ್, ಉಪವಿಭಾಗಾಧಿಕಾರಿ ದೇವಸ್ಥಾನ ಆಡಳಿತ ಅಧಿಕಾರಿಗಳಾಗಬೇಕು. ಮೇಲುಸ್ತುವಾರಿಯಾಗಿ ಜಿಲ್ಲಾಧಿಕಾರಿ ಇರುವರು. ಆದರೆ ಇವರ ಆಡಳಿತ ಸಂಪೂರ್ಣ ಹದಗೆಟ್ಟಿದೆ ಎಂದು ಕಿಡಿಕಾರಿದರು.ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಿ ಗೋಲ್ಡನ್ ಪಾಸ್ ವಿತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲೂ ಪಾರದರ್ಶಕತೆ ಇಲ್ಲ. ಯಾರಿಗೆ ಪಾಸ್ ನೀಡಲಾಗುತ್ತಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಪ್ರತಿದಿನ 1 ಸಾವಿರ ಪಾಸ್ ವಿತರಣೆ, ಒಟ್ಟು 18 ಸಾವಿರ ಪಾಸ್ ಮುದ್ರಣಕ್ಕೆ ನಿರ್ಧಾರ ಮಾಡಲಾಗಿತ್ತು. ಆದರೆ ಈಗಾಗಲೇ 40 ಸಾವಿರ ಪಾಸ್ ಮುದ್ರಿಸಲಾಗಿದೆ ಎಂದು ಆರೋಪಿಸಿದರು.ಕಳೆದ ಬಾರಿ ಅಧಿಕೃತವಾಗಿ ಕೇವಲ ಶೇ.5ರಷ್ಟು ಪಾಸ್‌ಗಳು ಮುದ್ರಿತವಾಗಿದ್ದು, ಉಳಿದ 95ರಷ್ಟು ಪಾಸ್‌ಗಳು ಅನಧಿಕೃತವಾಗಿ ಮುದ್ರಿತವಾಗಿದ್ದವು ಎಂದು ದೇವರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ದೇವಸ್ಥಾನ ಆಡಳಿತ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ದೂರಿದರು.
ಟೆಂಡರ್‌ನಲ್ಲಿ ಭಾರಿ ಅಕ್ರಮ, ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮೆರಾ ಅಳವಡಿಕೆ, ವಿದ್ಯುತ್ ಅಲಂಕಾರ ಸೇರಿದಂತೆ ಹಲವು ಟೆಂಡರ್‌ಗಳಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ಜರ್ಮನ್ ಟೆಂಟ್ ಮತ್ತು ಬ್ಯಾರಿಕೇಡ್ ನಿರ್ಮಾಣಕ್ಕೆ 65 ಲಕ್ಷ ಸಾಕಾಗುತ್ತಿದ್ದರೂ, 86.99 ಲಕ್ಷಕ್ಕೆ ಟೆಂಡರ್ ನೀಡಲಾಗಿದೆ. ಸಿಸಿ ಕ್ಯಾಮೆರಾ ಖರೀದಿಸಿದರೆ 20 ಲಕ್ಷ ವೆಚ್ಚವಾಗುತ್ತಿತ್ತು, ಆದರೆ ಬಾಡಿಗೆಗೆ 60 ಲಕ್ಷ ನೀಡಿರುವುದು ಭಾರೀ ಅಕ್ರಮ ಎಂದರು.ಜಾತ್ರೆಯಿಂದ ಕೋಟ್ಯಂತರ ರುಪಾಯಿ ಹಣ ಬರುತ್ತಿದೆ. ಆದರೆ ಈ ಹಣ ಸರಿಯಾದ ರೀತಿಯಲ್ಲಿ ಬಳಸಲಾಗುತ್ತಿದೆಯೇ ಎಂಬ ಮಾಹಿತಿ ಇಲ್ಲ ಎಂದು ದೇವರಾಜೇಗೌಡ ಹೇಳಿದರು. ಈ ಹಣದಿಂದ ದೇವಾಲಯ ಸುತ್ತಲಿನ ಕಟ್ಟಡಗಳನ್ನು ಖರೀದಿ ಮಾಡಿ ದೇವಾಲಯ ಆವರಣ ವಿಸ್ತರಿಸಬಹುದಿತ್ತು, ಆದರೆ ಆಡಳಿತದಿಂದ ಸೂಕ್ತ ಕ್ರಮವಿಲ್ಲ ಎಂದು ಟೀಕಿಸಿದರು.
ಹಾಸನದಿಂದ ಸ್ಪರ್ಧೆ ಮಾಡಲು ಸಿದ್ಧ:ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್ ಒಪ್ಪಿದರೆ ಹಾಸನ ಕ್ಷೇತ್ರದಿಂದಲೇ ಸ್ಪರ್ಧಿಸಲು ಸಿದ್ಧ ಎಂದರು. ಹಿಂದೆ ಬಿಜೆಪಿ ಅಭ್ಯರ್ಥಿ ಲ್ಯಾಂಡ್ ಮಾಫಿಯಾ ಜೊತೆಗೂಡಿ ಪಕ್ಷದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕಾಂಗ್ರೆಸ್ ಲೋಕಸಭಾ ಸದಸ್ಯರೊಂದಿಗೆ ಒಡಂಬಡಿಕೆ ಮಾಡಿಕೊಂಡು ಗಣಪತಿ ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಹೀಗಾಗಿ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದು, ಹೊಳೆನರಸೀಪುರ ಅಥವಾ ಹಾಸನದಿಂದಲೇ ಸ್ಪರ್ಧೆ ಮಾಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರ ಶಿವರಾಂ, ನಾಗರಾಜ್ ಇತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))