ಕಾರ್ಮಿಕರ ಮಂಡಳಿಯಲ್ಲಿ ಭಾರೀ ಲೋಪ : ಸಿಎಜಿ

| N/A | Published : Aug 21 2025, 01:00 AM IST / Updated: Aug 21 2025, 08:53 AM IST

Karnataka politics live news HC Mahadevappa press conference

ಸಾರಾಂಶ

ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಲ್ಯಾಣ ಯೋಜನೆಗಳ ಅನುಷ್ಠಾನ, ಕಾಯ್ದೆ/ನಿಯಮಗಳ ಉಲ್ಲಂಘನೆ, ಅನಧಿಕೃತ ವೆಚ್ಚ, ಆಂತರಿಕ ಆಡಿಟ್‌ ವಿಭಾಗ ಸ್ಥಾಪಿಸದಿರುವುದು ಸೇರಿ ಹಲವು ಲೋಪ ಎಸಗಿರುವುದು   ಬಯಲಾಗಿದೆ.

  ವಿಧಾನಸಭೆ :  ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಲ್ಯಾಣ ಯೋಜನೆಗಳ ಅನುಷ್ಠಾನ, ಕಾಯ್ದೆ/ನಿಯಮಗಳ ಉಲ್ಲಂಘನೆ, ಅನಧಿಕೃತ ವೆಚ್ಚ, ಆಂತರಿಕ ಆಡಿಟ್‌ ವಿಭಾಗ ಸ್ಥಾಪಿಸದಿರುವುದು ಸೇರಿ ಹಲವು ಲೋಪ ಎಸಗಿರುವುದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯಲ್ಲಿ (ಸಿಎಜಿ) ಬಯಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರು ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ 2018ರಿಂದ 2023ರ ಅವಧಿಯ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು.

ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಾಮಾಜಿಕ ಕಲ್ಯಾಣ ಯೋಜನೆಗಳ ಅಡಿಯಲ್ಲಿ ನೋಂದಾಯಿಸದ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಪಾವತಿ ಮಾಡುವಲ್ಲಿ ತಿದ್ದುಪಡಿ ಕಾಯ್ದೆ/ನಿಯಮ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಸಂಚಾರಿ ಚಿಕಿತ್ಸಾ ಘಟಕಗಳ ಯೋಜನೆ ಅನುಷ್ಠಾನ, ಗುತ್ತಿಗೆ ನೀಡುವಲ್ಲಿ ಪಾರದರ್ಶಕತೆ ಕೊರತೆ ಮತ್ತು ಏಜೆನ್ಸಿಗಳಿಗೆ ಪೂರ್ವ ಅರ್ಹತೆ ಮಾನದಂಡಗಳಿಲ್ಲ. ಅಸಮರ್ಪಕ ಸಂವಹನ ಮತ್ತು ದಾಖಲೆಗಳ ಇಡದಿರುವುದು, ಸೀಮಿತ ವ್ಯಾಪ್ತಿ ಮತ್ತು ಸಿಬ್ಬಂದಿ ಅಗತ್ಯತೆಗಳ ಅನುಸರಣೆ ಮಾಡದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

₹258.80 ಕೋಟಿ ಅನಧಿಕೃತ ವೆಚ್ಚ:

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಸಚಿವ ಸಂಪುಟದ ಅನುಮೋದನೆ ಅಗತ್ಯ ತಪ್ಪಿಸಲು ಪ್ರಿವೆಂಟಿವ್‌ ಹೆಲ್ತ್‌ ಕೇರ್‌ ಟ್ರೈನಿಂಗ್ ಆ್ಯಂಡ್‌ ಚೆಕ್‌ ಅಪ್ ಯೋಜನೆಯಡಿ 30 ವೈಯಕ್ತಿಕ ಯೋಜನೆಗಳಾಗಿ ವಿಭಜಿಸಿದೆ. ಮುಕ್ತ ಟೆಂಡರ್‌ಗೆ ಹೋಗುವ ಬದಲು ಕೋಟೇಶನ್‌ಗಳನ್ನು ಕರೆದಿದೆ. ಕೋವಿಡ್‌ನ 1 ಮತ್ತು 2ನೇ ಅಲೆ ಸಮಯದಲ್ಲಿ ಒದಗಿಸಲಾದ ಕೆಟಿಪಿಪಿ ಕಾಯ್ದೆ ಪರಿಚ್ಛೇದ 4(ಎ) ಅಡಿ ವಿನಾಯಿತಿ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಂಡಳಿ ವಿಭಜಿತ ಕಾಮಗಾರಿ ನೀಡಲು ಮುಂದಾದ ಪರಿಣಾಮ 258.80 ಕೋಟಿ ರು. ಅನಧಿಕೃತವಾಗಿ ವೆಚ್ಚವಾಗಿದೆ ಎಂದು ಸಿಎಜಿ ವರದಿಯಲ್ಲಿ ಗುರುತಿಸಲಾಗಿದೆ.

ಆಂತರಿಕ ಲೆಕ್ಕಪರಿಶೋಧನಾ ವಿಭಾಗ ಸ್ಥಾಪಿಸಿಲ್ಲ:

ಮಂಡಳಿಯು ನಿಗದಿತ ನಿಯಮಗಳ ಅನುಸರಣೆ ಮತ್ತು ದಾಖಲೆ ಪುಸ್ತಕಗಳ ಸರಿಯಾದ ನಿರ್ವಹಣೆ ಖಚಿತಪಡಿಸಿಕೊಳ್ಳಲು ಆಂತರಿಕ ಲೆಕ್ಕಪರಿಶೋಧನಾ ವಿಭಾಗ ಸ್ಥಾಪಿಸಿಲ್ಲ. ಬಿಒಸಿಡಬ್ಲ್ಯು ಕಾಯ್ದೆ ಪರಿಣಾಮಕಾರಿ ಅನುಷ್ಠಾನದ ನಿಟ್ಟಿನಲ್ಲಿ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ಮಾಡಿ ಐದು ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ನೀಡಿದರೂ ಯಾವುದೇ ಸಾಮಾಜಿಕ ಲೆಕ್ಕಪರಿಶೋಧನಾ ಚಟುವಟಿಕೆ ಪ್ರಾರಂಭಿಸಿಲ್ಲ. ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿ ಸ್ಥಾಪನೆಯಾದ ಬಳಿಕ ಒಂದೇ ಒಂದು ಸಭೆ ಕರೆದಿಲ್ಲ. ಸುಪ್ರೀಂ ಕೋರ್ಟ್‌ ಮತ್ತು ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಿರುವುದು ಸಿಎಜಿ ವರದಿಯಲ್ಲಿ ಬೆಳಕಿಗೆ ಬಂದಿದೆ.

ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 5.27 ಕೋಟಿ ರು. ಜಮಾವಣೆ ಬಗ್ಗೆ ಮಂಡಳಿ ಇನ್ನೂ ಪತ್ತೆ ಮಾಡಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

18.12 ಕೋಟಿ ರು. ಮೊತ್ತದ 9,654 ದೋಷಪೂರಿತ ಚೆಕ್‌, ಡಿಡಿ:

ಮಂಡಳಿಯು 2007 ರಿಂದ 18.12 ಕೋಟಿ ರು. ಮೊತ್ತದ ಒಟ್ಟು 9,654 ದೋಷಪೂರಿತ ಚೆಕ್‌ಗಳು, ಡಿಮಾಂಡ್‌ ಡ್ರಾಫ್ಟ್‌ಗಳನ್ನು ಹಿಂದಿರುಗಿಸಿದೆ. ಈ ಚೆಕ್‌ಗಳು ಮತ್ತು ಡಿಮ್ಯಾಂಡ್‌ ಡ್ರಾಫ್ಟ್‌ಗಳನ್ನು ಪತ್ತೆ ಹಚ್ಚಲು ಸಿಎಜಿ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ. 2018-19 ರಿಂದ 2022-23 ರ ಅವಧಿಯಲ್ಲಿ ಮಂಡಳಿ ರವಾನೆ ಮಾಡಿರುವ ಮೊತ್ತ ಮತ್ತು ಮಂಡಳಿಯಿಂದ ಪಡೆದ ಮೊತ್ತಗಳ ನಡುವೆ ಗಮನಾರ್ಹ ವ್ಯತ್ಯಾಸಗಳಿವೆ.

ಬಿಎಂಟಿಸಿಯಿಂದ 6.06 ಕೋಟಿ ರು. ಕಾರ್ಮಿಕರ ತೆರಿಗೆ ಸಂಗ್ರಹಿಸಲಾಗಿದ್ದರೂ, ಅದನ್ನು ಖಾತೆಗೆ ಜಮೆ ಮಾಡಿಲ್ಲ. ಎರಡು ವರ್ಷಗಳಿಗೂ ಹೆಚ್ಚು ಕಾಲ ಅದು ತನ್ನಲ್ಲೇ ಉಳಿಸಿಕೊಂಡಿದೆ ಎಂಬುದು ದಾಖಲೆಗಳ ಪರಿಶೀಲನೆಯಿಂದ ಬಹಿರಂಗವಾಗಿದೆ.

ಅನರ್ಹರ ನೋಂದಣಿ:

ಮಂಡಳಿಯು ಉಪ ಕರ ಸಂಗ್ರಹಿಸುವ, ಜಮೆ ಮಾಡುವ ಏಜೆನ್ಸಿಗಳ ಸಮಗ್ರ ದತ್ತಾಂಶ ಹೊಂದಿಲ್ಲ. ನಿಜವಾದ ಉಪ ಕರ ಮೊತ್ತ, ಸಂಗ್ರಹಿಸಿದ ಮತ್ತು ಜಮಾವಣೆಯಾದ ಮೊತ್ತದ ಬಗ್ಗೆಯೂ ತಿಳಿಸಿಲ್ಲ. ಸಂಗ್ರಹಿಸಲಾದ ಉಪ ಕರವನ್ನು ನಿರ್ಣಯಿಸಲು ಮಂಡಳಿ ಯಾವುದೇ ಅಧಿಕಾರಿ ನೇಮಿಸಿಲ್ಲ. 42,50,122 ನೋಂದಾಯಿತ ಫಲಾನುಭವಿಗಳನ್ನು ಒಳಗೊಂಡಿರುವ ಸೇವಾಸಿಂಧು ಪೋರ್ಟಲ್‌ನಿಂದ ದತ್ತಾಂಶ ನಮೂದಿಸುವ ಮೊದಲು ಅಸಮರ್ಪಕವಾಗಿ ಮೌಲ್ಯೀಕರಿಸಲಾಗಿದೆ. ಸೇವಾಸಿಂಧು ಪೋರ್ಟಲ್​ನಲ್ಲಿ ಫಲಾನುಭವಿಗಳ ನೋಂದಣಿ ಮತ್ತು ನವೀಕರಣಕ್ಕಾಗಿ ಸಲ್ಲಿಸಲಾದ ಅರ್ಜಿಯಲ್ಲಿ ವಿವರಗಳ ಕೊರತೆ ಇದ್ದರೂ ಅದನ್ನು ಸ್ವೀಕರಿಸಲಾಗಿದೆ. ಪರಿಣಾಮ ಗುಮಾಸ್ತ, ನೇಕಾರ ಮತ್ತು ಇತರ ವೃತ್ತಿಯಂತಹ ಅನರ್ಹ ಕಾರ್ಮಿಕರು ಕಟ್ಟಡ ಕಾರ್ಮಿಕರಾಗಿ ನೋಂದಾಯಿಲ್ಪಟ್ಟು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

Read more Articles on