ಸಾರಾಂಶ
ನವದೆಹಲಿ: ದೆಹಲಿಯಲ್ಲಿ ಆಪ್ ನೇತಾರರಾದ ಅರವಿಂದ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಬಂಧನಕ್ಕೆ ಕಾರಣ ಆಗಿದ್ದ ಆಪ್ ಸರ್ಕಾರದ ವಿವಾದಿತ ಮದ್ಯ ನೀತಿಯಿಂದಾಗಿ ಸರ್ಕಾರದ ಖಜಾನೆಗೆ 2026 ಕೋಟಿ ರು. ನಷ್ಟ ಆಗಿದೆ ಎಂದು ಸಿಎಜಿ(ಮಹಾಲೇಖಪಾಲರ) ವರದಿಯಲ್ಲಿ ಹೇಳಲಾಗಿದೆ.
ಸರ್ಕಾರದ ಕೆಲ ತಪ್ಪು ನಡೆಗಳು ಹೇಗೆ ಆಪ್ ನಾಯಕರ ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಟ್ಟವು ಎಂಬುದನ್ನು ಅದರಲ್ಲಿ ವಿವರಿಸಲಾಗಿದೆ.
ಶಿಫಾರಸು ಕಡೆಗಣನೆ:
ಮದ್ಯ ನೀತಿ ಜಾರಿ ವೇಳೆ ಡಿಸಿಎಂ ಮನೀಷ್ ಸಿಸೋಡಿಯಾ ನೇತೃತ್ವದ ಸಚಿವರ ಸಮಿತಿಯು ತಜ್ಞರ ಸಮಿತಿಯ ಶಿಫಾರಸುಗಳನ್ನು ಕಡೆಗಣಿಸಿದೆ. ಸಂಪುಟ ಅಥವಾ ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆ ಪಡೆಯದೆ ಮದ್ಯ ನೀತಿಯ ಪ್ರಮುಖ ನಿರ್ಧಾರಗಳಿಗೆ ಅನುಮತಿ ನೀಡಲಾಯಿತು. ನಿಯಮಾನುಸಾರ ಅನುಮೋದನೆಗಾಗಿ ಸದನದಲ್ಲೂ ಮಂಡಿಸಿಲ್ಲ. ನಿಯಮ ಉಲ್ಲಂಘಿಸಿದವರ ಮೇಲೆ ಉದ್ದೇಶಪೂರ್ವಕವಾಗಿ ದಂಡ ವಿಧಿಸಲಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಕೆಲ ರಿಟೇಲರ್‌ಗಳು ಅವಧಿಗೆ ಮುನ್ನವೇ ಸರೆಂಡರ್ ಮಾಡಿದ ಲೈಸೆನ್ಸ್‌ಗಾಗಿ ಮರು ಟೆಂಡರ್ ಕರೆಯದ ಕಾರಣ ಸರ್ಕಾರ 890 ಕೋಟಿ ರು. ನಷ್ಟ ಅನುಭವಿಸಬೇಕಾಯಿತು. ಇನ್ನು ವಿಭಾಗೀಯ ಲೈಸೆನ್ಸ್‌ಗೆ ನೀಡಿದ ವಿನಾಯ್ತಿಗಳಿಂದಾಗಿ 941 ಕೋಟಿ ರು. ನಷ್ಟ ಆಯಿತು. ಅದೇ ರೀತಿ ಕೋವಿಡ್ ನಿಯಂತ್ರಣ ಕ್ರಮಗಳಿಂದಾಗಿ ವಿಭಾಗೀಯ ಲೈಸೆನ್ಸ್ ಶುಲ್ಕದಲ್ಲಿ 144 ಕೋಟಿ ರು. ಮನ್ನಾ ಮಾಡಲಾಯಿತು. ವಾಣಿಜ್ಯವಾಗಿ ನಷ್ಟವಾದರೆ ಅದಕ್ಕೆ ಲೈಸನ್ಸ್‌ದಾರನೇ ಹೊಣೆ ಎಂದು ಟೆಂಡರ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದ್ದರೂ ಸರ್ಕಾರ ಶುಲ್ಕ ಮನ್ನಾ ಮಾಡಿತು ಎಂದು ಸಿಎಜಿ ಹೇಳಿದೆ.
ಕೇಜ್ರಿವಾಲ್-ನಡ್ಡಾ ವಾಕ್ಸಮರ
ಸಿಎಜಿ ವರದಿ ಕುರಿತು ಬಿಜೆಪಿ ಮತ್ತು ಆಪ್ ನಡುವೆ ಇದೀಗ ತೀವ್ರ ತಿಕ್ಕಾಟ ಶುರುವಾಗಿದೆ. ಸಿಎಜಿ ವರದಿ ಆಪ್ ಸರ್ಕಾರದ ಉದ್ದೇಶಪೂರ್ವಕ ತಪ್ಪುಗಳ್ನು ಬಹಿರಂಗಪಡಿಸಿದೆ, ಕೆಲವೇ ವಾರಗಳಲ್ಲಿ ಈ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಕಿಡಿಕಾರಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಹಾಗೂ ಆಪ್ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಸಿಎಜಿ ವರದಿಯನ್ನು ಬಿಜೆಪಿ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆಯೇ? ಆ ವರದಿ ಇನ್ನೂ ಮಂಡನೆಯಾಗಿಲ್ಲ. ಆದರೂ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ. ಸೋಲಿನ ಭೀತಿಯಿಂದ ಇಂಥ ಆರೋಪ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸಿಎಂ ಅಭ್ಯರ್ಥಿ’ ಬಿಧೂರಿ ಚರ್ಚೆಗೆ ಬರಲಿ: ಕೇಜ್ರಿ ಸವಾಲುನವದೆಹಲಿ: ‘ವಿವಾದಿತ ನಾಯಕ ರಮೇಶ್ ಬಿಧೂರಿಯನ್ನು ಸಿಎಂ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಲಿದೆ’ ಎಂದು ದೆಹಲಿ ಸಿಎಂ ಅತಿಶಿ ಹೇಳಿದ ಬೆನ್ನಲ್ಲೇ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಕೂಡ ಅದೇ ಮಾತನ್ನು ಹೇಳಿದ್ದು, ‘ಬಿಧೂರಿಯವರನ್ನು 1-2 ದಿನದಲ್ಲಿ ಸಿಎಂ ಅಭ್ಯರ್ಥಿಯೆಂದು ಬಿಜೆಪಿ ಘೋಷಿಸಲಿದೆ. ಆಯ್ಕೆ ಬಳಿಕ ಅವರು ಬಹಿರಂಗ ಚರ್ಚೆಗೆ ಬರಬೇಕು’ ಎಂದು ಸವಾಲು ಹಾಕಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ‘ಬಿಧೂರು ಹೆಸರು ಘೋಷಣೆ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ. ಬಿಧೂರಿ ಅಥವಾ ಬೇರೆ ಯಾರೇ ಆಗಿರಲಿ. ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಗಳ ನಡುವೆ ಬಹಿರಂಗ ಚರ್ಚೆಯಾಗಬೇಕು. ಬಿಜೆಪಿಗೆ ನಾವು ಸವಾಲು ಹಾಕುತ್ತೇವೆ’ಎಂದರು.
ಏಕಾಂಗಿ ಸ್ಪರ್ಧೆ: ಠಾಕ್ರೆ ಶಿವಸೇನೆ ಘೋಷಣೆ
ನಾಗ್ಪುರ: ಇಂಡಿಯಾ ಕೂಟದಲ್ಲಿನ ಒಡಕು ದಿನೇ ದಿನೇ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ (ಇಂಡಿಯಾ ಕೂಟ) ಸೋಲಿನ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಕೂಟದ ಅಂಗಪಕ್ಷ ಶಿವಸೇನೆ (ಠಾಕ್ರೆ ಬಣ) ಘೋಷಿಸಿದೆ.
ಎರಡು ದಿನಗಳ ಹಿಂದೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ, ಫೆ.5ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಆಪ್‌ಗೆ ಬೆಂಬಲ ನೀಡಿತ್ತು. ಅಲ್ಲದೆ, ಇಂಡಿಯಾ ಕೂಟ ವಿಸರ್ಜಿಸಿಬಿಡಿ ಎಂದು ಠಾಕ್ರೆ ಅವರ ಆಪ್ತ ಸಂಜಯ ರಾವುತ್ ಹೇಳಿದ್ದರು.ಇದರ ಬೆನ್ನಲ್ಲೇ ಶನಿವಾರ ಸಂಜಯ್ ರಾವುತ್ ಮಾತನಾಡಿ, ‘ಮೈತ್ರಿಕೂಟದಲ್ಲಿ ಪ್ರತ್ಯೇಕ ಪಕ್ಷಗಳ ಕಾರ್ಯಕರ್ತರಿಗೆ ಅವಕಾಶಗಳು ಸಿಗುವುದಿಲ್ಲ. ಇದು ಸಂಘಟನೆ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ನಾವು ಮುಂಬೈ, ಥಾಣೆ, ನಾಗ್ಪುರ, ಇತರ ಮುನ್ಸಿಪಲ್ ಕಾರ್ಪೋರೇಶನ್‌ಗಳು, ಜಿಲ್ಲಾ ಪರಿಷತ್ ಮತ್ತು ಪಂಚಾಯತ್‌ಗಳಲ್ಲಿ ನಮ್ಮ ಬಲದ ಮೇಲೆ ಚುನಾವಣೆ ಎದುರಿಸುತ್ತೇವೆ’ ಎಂದರು.
ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ ಬಗ್ಗೆ ಹಿರಿಯ ನಾಯಕರು ನಿರ್ಧರಿಸುತ್ತಾರೆ ಎಂದಿದೆ.