ದೇಶದ ಬಹುತೇಕರಿಗೆ ಸಂವಿಧಾನ ಪೀಠಿಕೆಯ ಅರಿವಿಲ್ಲ: ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ

| Published : Feb 12 2024, 01:31 AM IST / Updated: Feb 12 2024, 03:58 PM IST

ದೇಶದ ಬಹುತೇಕರಿಗೆ ಸಂವಿಧಾನ ಪೀಠಿಕೆಯ ಅರಿವಿಲ್ಲ: ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಅರ್ಧದಷ್ಟು ಜನರು ಸಂವಿಧಾನದ ಪೀಠಿಕೆ ಬಗ್ಗೆ ಅರಿವಿಲ್ಲದೆ ಜಾತಿ, ಮತೀಯ ಗಲಭೆ, ಧರ್ಮ, ದೇವರ ಹೆಸರಿನಲ್ಲಿ ಗುಲಾಮರಂತೆ ಬದುಕುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. ಬೇಲೂರಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಸಂವಿಧಾನದ ಅಡಿಯಲ್ಲಿ ದೇಶದ ೧೪೦ ಕೋಟಿ ಜನರು ಜೀವನ ಸಾಗಿಸುತ್ತಿದ್ದಾರೆ. ಆದರೆ ಅರ್ಧದಷ್ಟು ಜನರು ಸಂವಿಧಾನದ ಪೀಠಿಕೆ ಬಗ್ಗೆ ಅರಿವಿಲ್ಲದೆ ಜಾತಿ, ಮತೀಯ ಗಲಭೆ, ಧರ್ಮ, ದೇವರ ಹೆಸರಿನಲ್ಲಿ ಗುಲಾಮರಂತೆ ಬದುಕುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೧೩ ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ‘ನಮಗೆ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ನಿಜವಾದ ದೇವರು. 

ನಿಮ್ಮನ್ನು ದೇವರ ಹಾಗೂ ಮೌಡ್ಯದ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಇದರ ಜತೆಯಲ್ಲಿ ಇಡೀ ವಿಶ್ವವೇ ಮೆಚ್ಚಿದ ಸಂವಿಧಾನವನ್ನು ಅಳಿಸಿ ಹಾಕಲು ಮುಂದಾದರೆ ದೊಡ್ಡ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ತಮ್ಮ ಮಕ್ಕಳಿಗೆ ಅಂಬೇಡ್ಕರ್ ಆಶಯದಂತೆ ಪ್ರತಿಯೊಬ್ಬರಲ್ಲೂ ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸರ್ಕಾರ ಸವಲತ್ತುಗಳನ್ನು ಪ್ರತಿಯೊಬ್ಬರು ಉಪಯೋಗ ಪಡೆಸಿಕೊಳ್ಳಬೇಕು. 

ನಾನು ಉಸ್ತುವಾರಿ ಸಚಿವನಾಗಿದ್ದಾಗ ಹೊಯ್ಸಳ ಉತ್ಸವ ನಡೆಸಿದ್ದೆ, ಅದರಂತೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಜಿಲ್ಲೆಯಲ್ಲಿ ಮತ್ತೆ ಹಲ್ಮಿಡಿ ಹಾಗೂ ಹೊಯ್ಸಳ ಉತ್ಸವವನ್ನು ಪುನಃ ಪ್ರಾರಂಭಿಸಲು ಸಚಿವರೊಂದಿಗೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

ಸಂವಿಧಾನದ ಮಹಾನ್ ಗ್ರಂಥದ ಜಾಗೃತಿ ಜಾಥಾದ ಮೂಲಕ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಪ್ರತಿ ಮನೆ ಮನೆಗಳಿಗೆ ಜಾತಿ, ಮತ, ಭೇದ ಮರೆತು ಸಂವಿಧಾನದ ಅರಿವನ್ನು ಮೂಡಿಸುವ ಕೆಲಸ ಮಾಡುವ ಮೂಲಕ ಅದರ ಮಹತ್ವ ಹೇಳಿದ್ದೇವೆ ಎಂದರು.

ಸಹಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಮಾತನಾಡಿ, ‘ದೇಶದ ಪವಿತ್ರ ಗ್ರಂಥ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. 

ನಾವೆಲ್ಲರೂ ಸಹ ಡಾ ಬಿ ಆರ್ ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯದಡಿಯಲ್ಲಿ ಬದುಕುತ್ತಿದ್ದೇವೆ. ಅಲ್ಲದೆ ಅವರು ನೀಡಿರುವ ಮಿಸಲಾತಿ ಭಿಕ್ಷೆ ಎಂದು ಯಾರೂ ಸಹ ಭಾವಿಸಬಾರದು. 

ಪ್ರತಿಯೊಬ್ಬರೂ ಶಿಕ್ಷಣ ಮೂಲಕ ವಿದ್ಯಾವಂತರಾಗುವುದೇ ಮೊದಲ ಗುರಿ ಎಂಬ ಡಾ ಅಂಬೇಡ್ಕರ್ ಆಶಯದಂತೆ ಪ್ರತಿಯೊಬ್ಬರು ಬದುಕಬೇಕು. ಸಂವಿಧಾನ ರಚಿಸುವಾಗ ಒಂದು ಜಾತಿಗೆ ಸೀಮಿತ ಮಾಡಿಲ್ಲ. 

ಪ್ರತಿಯೊಬ್ಬರು ಸಹ ಅವರ ಆಶಯದಲ್ಲೇ ಬದುಕುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

ಶಾಸಕ ಎಚ್‌.ಕೆ. ಸುರೇಶ್ ಮಾತನಾಡಿ, ಸಾಮಾನ್ಯನೂ ಸಹ ಉನ್ನತ ಹುದ್ದೆಯನ್ನು ಅಲಂಕರಿಸಬಹುದು ಎಂಬುದಕ್ಕೆ ಅಂಬೇಡ್ಕರ್ ನೀಡಿದ ಸಂವಿಧಾನ ಎಲ್ಲರಿಗೂ ದಾರಿದೀಪವಾಗಿದೆ. 

ಜಿಲ್ಲೆಯ ಸಚಿವರಾಗಿದ್ದ ಮಹದೇವಪ್ಪರಿಂದ ಇಡೀ ಜಿಲ್ಲೆಯೆ ಅಭಿವೃದ್ಧಿ ಪಥದತ್ತ ಸಾಗಿತ್ತು. ಇಡೀ ರಾಜ್ಯದಲ್ಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮುಖಂಡರೊಬ್ಬರು ಮುಖ್ಯಮಂತ್ರಿಯಾಗಲು ಘನತೆ ಇದ್ದರೆ ಅದು ಮಹದೇವಪ್ಪರವರಿಗೆ ಮಾತ್ರ ಎಂದರು.

ಭಂತೇಜಿ ಭೋದಿ ದತ್ತ ಮಹಾತೇರಾ ಕಾರ್ಯಕ್ರಮದ ಸಾನಿದ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಮಾತನಾಡಿದರು.

ಮಾಜಿ ಸಚಿವ ಶಿವರಾಂ, ಎಚ್‌.ಕೆ. ಚಂದ್ರಶೇಖರ್, ಡಾ.ನಾರಾಯಣಸ್ವಾಮಿ, ಚಾ.ನಾ.ದಾನಿ, ತಹಸೀಲ್ದಾರ್ ಎಂ ಮಮತಾ, ಶಿವಶಂಕರ್, ಶಿವಮರಿಯಪ್ಪ, ಸಿದ್ದಯ್ಯ, ಬಳ್ಳೂರು ಉಮೇಶ್, ರಾಜು, ಪರ್ವತಯ್ಯ ಇದ್ದರು.

ಇದೇ ವೇಳೆ ಸುಮಾರು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಪ್ರತಿಭಾ ಪುರಸ್ಕಾರ ನೀಡಿದರು.

ಬೇಲೂರಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ೧೩ ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸಂವಿಧಾನ ಕುರಿತಾದ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.