ಶಿರಹಟ್ಟಿಯಲ್ಲಿ ಸಂಭ್ರಮದ ಮಕರ ಸಂಕ್ರಾಂತಿ ಆಚರಣೆ

| Published : Jan 15 2025, 12:47 AM IST

ಶಿರಹಟ್ಟಿಯಲ್ಲಿ ಸಂಭ್ರಮದ ಮಕರ ಸಂಕ್ರಾಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಭಾರತದ ಕಥೆಯನ್ನು ತುಲನಾತ್ಮಕವಾಗಿ ತೆಗೆದುಕೊಂಡರೆ ಮಹಾಭಾರತದಲ್ಲಿ ಭೀಷ್ಮ ಪ್ರಾಣ ಬಿಡುವ ಸಂದರ್ಭದಲ್ಲಿ ಹರಿ ಸ್ಮರಣೆ ಮಾಡುತ್ತಾ ಸಂಕ್ರಮಣದ ಪುಣ್ಯ ಕಾಲವನ್ನೇ ಕಾಯುತ್ತಿದ್ದನೆಂದು ಮಹಾಭಾರತದ ಉಲ್ಲೇಖಗಳಿಂದ ತಿಳಿದು ಬರುತ್ತದೆ.

ಶಿರಹಟ್ಟಿ: ಮಕರ ಸಂಕ್ರಾಂತಿಯನ್ನು ತಾಲೂಕಿನ ರೈತಾಪಿ ವರ್ಗ ಸೇರಿದಂತೆ ಸಾರ್ವಜನಿಕರು ಹೊಳೆ-ಇಟಗಿ ಹಾಗೂ ಸಾಸಲವಾಡ ಗ್ರಾಮದ ಹೊರವಲಯದಲ್ಲಿನ ತುಂಗಭದ್ರಾ ನದಿ ಮತ್ತು ಪುಣ್ಯ ಕ್ಷೇತ್ರ ವರವಿ ಮೌನೇಶ್ವರ ಮಠದ ಹಿಂಬದಿಯಲ್ಲಿರುವ ಅಂಬಲಿ ಹೊಂಡದಲ್ಲಿ ಸ್ನಾನ ಮತ್ತು ಪುಣ್ಯ ಕಾರ್ಯಗಳಲ್ಲಿ ತೊಡಗುವ ಮೂಲಕ ತಮ್ಮ ಜಮೀನುಗಳಲ್ಲಿ ಪೂಜೆ ಪುನಸ್ಕಾರ ಮಾಡಿ ಕೃತಜ್ಞತೆ ಸಲ್ಲಿಸಿದ್ದು, ಸಂಕ್ರಮಣದ ವಿಶೇಷವಾಗಿತ್ತು.

ಹೆಚ್ಚಾಗಿ ರೈತಾಪಿ ವರ್ಗ ತಮ್ಮ ಜಮೀನು ಆಸುಪಾಸಿನಲ್ಲಿ ಹರಿದಿರುವ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ ಕಂಡುಬಂತು. ಸಾಮಾನ್ಯವಾಗಿ ಪುಣ್ಯ ಕಾರ್ಯದಲ್ಲಿ ಬರುವ ಪುಣ್ಯ ಮಾಸದಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಿರುವುದು ಈ ಹಿಂದಿನಿಂದ ಬಂದ ಸಂಪ್ರದಾಯ.

ಮಹಾಭಾರತದ ಕಥೆಯನ್ನು ತುಲನಾತ್ಮಕವಾಗಿ ತೆಗೆದುಕೊಂಡರೆ ಮಹಾಭಾರತದಲ್ಲಿ ಭೀಷ್ಮ ಪ್ರಾಣ ಬಿಡುವ ಸಂದರ್ಭದಲ್ಲಿ ಹರಿ ಸ್ಮರಣೆ ಮಾಡುತ್ತಾ ಸಂಕ್ರಮಣದ ಪುಣ್ಯ ಕಾಲವನ್ನೇ ಕಾಯುತ್ತಿದ್ದನೆಂದು ಮಹಾಭಾರತದ ಉಲ್ಲೇಖಗಳಿಂದ ತಿಳಿದು ಬರುತ್ತದೆ. ಈ ಶುಭ ಸಂದರ್ಭದ ಮುರ್ಹೂತದಲ್ಲಿ ಗಂಗಾ, ತುಂಗಾ, ಕೃಷ್ಣೆ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ಭಕ್ತರು ಗಂಗಾ ಪಾನ ತುಂಗಾ ಸ್ನಾನ ಮಾಡಿ ಪುಣ್ಯದ ಮಡಿಲು ಸೇರುವ ಬಯಕೆ ಹೊಂದಿರುತ್ತಾರೆ.

ಪುರಾಣ, ಪುಣ್ಯ ಕಥೆಗಳಲ್ಲಿ ದಕ್ಷಿಣಾಯಣದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲನ್ನು ಮಕರ ಸಂಕ್ರಾಂತಿಯ ಪುಣ್ಯದಿನದಂದು ತೆರೆಯುತ್ತಾರೆಂದು ಹೇಳಲಾಗುತ್ತದೆ ಹಾಗೂ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಉಲ್ಲೇಖಿಸಲಾಗಿದೆ.

ವಿಶೇಷ ಮಹತ್ವ: ಮಕರ ಸಂಕ್ರಮಣಕ್ಕೆ ಇತಿಹಾಸದಲ್ಲಿ ಪುಣ್ಯ ಕಥೆಗಳಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ.ಈ ದಿನದಂದು ಜನತೆ ತಮ್ಮ ಪಾಪ ಕರ್ಮಾದಿ ತೊಳೆಯುವ ಪುಣ್ಯ ದಿನವೆಂದೇ ಭಾವಿಸಲಾಗುತ್ತದೆ.ವಿಶೇಷವಾಗಿ ಹೆಣ್ಣು ಮಕ್ಕಳು ಭಕ್ತಿ, ಭಾವ ಪರವಷರಾಗಿ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ಈ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಮಹಿಳೆಯರು ಸಂಕ್ರಾಂತಿಯಲ್ಲಿ ಹೊಸ ಬಟ್ಟೆ ತೊಟ್ಟು ಎಳ್ಳು ಬೆಲ್ಲ ನೀಡಲು ತೆರಳಿದರೆ ಗಂಡಸರು ಪೂಜೆ ಪುನಸ್ಕಾರ ಮಾಡಿ ದೇವಾಲಯಗಳಿಗೆ ಭೇಟಿ ನೀಡಿ ಕೃತಾರ್ಥರಾಗುತ್ತಾರೆ.

ಈ ಬಾರಿ ರೈತರು ಎಲ್ಲ ಸಂಕಷ್ಟ ಮರೆತು ವಿಜೃಂಭಣೆಯಿಂದ ಮಕರ ಸಂಕ್ರಾಂತಿಯನ್ನು ಆಚರಿಸುವುದು ವಿಶೇಷವಾಗಿತ್ತು. ಅಸಂಖ್ಯಾತ ಭಕ್ತರು ಹಾಗೂ ಕುಟುಂಬ ಸಮೇತ ಚಕ್ಕಡಿ (ಬಂಡಿ)ಗಳಲ್ಲಿ ರೈತರು ಬಂದು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಹೊಳೆ-ಇಟಗಿ, ಶಿರಹಟ್ಟಿ,ಸಾಸಲವಾಡ, ವರವಿ ಮಾರ್ಗದ ರಸ್ತೆಗಳಲ್ಲಿ ಸಂಕ್ರಮಣಕ್ಕೆ ತೆರಳುತ್ತಿದ್ದರಿಂದ ರಸ್ತೆಗಳು ವಾಹನ ದಟ್ಟಣೆಯಿಂದ ತುಂಬಿಕೊಂಡಿದ್ದವು. ಯುವಕರ ಪಡೆ ಸೈಕಲ್ ಮೇಲೂ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ವಾಹನ ಸಂಚಾರ ದಟ್ಟವಾಗಿದ್ದರೂ ಮೋಟಾರ್ ಬೈಕ್‌ನಲ್ಲಿ ಯುವಕರು ಉತ್ಸಾಹದಿಂದಲೇ ಸಂಚರಿಸಿದರು. ಕಪ್ಪತ್ತಗುಡ್ಡದ ಕಪ್ಪಲ್ಲಮಲ್ಲೇಶ್ವರ, ನಂದಿವೇರಿಮಠ, ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಮಠಗಳಿಗೂ ಭಕ್ತರು ಭೇಟಿ ನೀಡಿ ದರ್ಶನ ಪಡೆದರು.