ಕುಶಾಲನಗರ ಗೌಡ ಮಹಿಳಾ ಸಂಘ ಸುಮುಖ-ಸುಕೃತ ತಂಡದವರಿಂದ ಸಂಭ್ರಮದ ಮಕರ ಸಂಕ್ರಾತಿ ಹಬ್ಬದ ಆಚರಣೆ ನಡೆಯಿತು.

ಕುಶಾಲನಗರ: ಕುಶಾಲನಗರ ಗೌಡ ಮಹಿಳಾ ಸಂಘ ಸುಮುಖ-ಸುಕೃತ ತಂಡದವರಿಂದ ಸಂಭ್ರಮದ ಮಕರ ಸಂಕ್ರಾತಿ ಹಬ್ಬದ ಆಚರಣೆ ನಡೆಯಿತು.

ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾ ಆನಂದ್, ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ ಹಂಚಿಕೊಳ್ಳುವುದು ಒಂದು ಸುಂದರ ಸಂದೇಶ. ಎಳ್ಳು ಜೀವನದ ಕಷ್ಟವನ್ನು ಹಾಗೆ ಬೆಲ್ಲ ಜೀವನದ ಸುಖವನ್ನು ಸೂಚಿಸುತ್ತದೆ. ಜೀವನದಲ್ಲಿ ಸುಖ ದುಃಖವನ್ನು ಸಮನಾಗಿ ಸ್ವೀಕರಿಸಿ ಮಾತು ಸಿಹಿಯಾಗಿರಲಿ ಎಂಬ ಸಂದೇಶ ಇದರಲ್ಲಿ ಅಡಗಿದೆ. ಜೊತೆಗೆ ಚಳಿಗಾಲದಲ್ಲಿ ದೇಹಕ್ಕೆ ಶಕ್ತಿ ನೀಡುವ ಆಹಾರವು ಹೌದು. ಸಂಕ್ರಾಂತಿ ಹಬ್ಬದ ಆಚರಣೆ ಮೂಲಕ ನಾವು ಪ್ರೀತಿ ಸೌಹಾರ್ದ ಮತ್ತು ಒಗ್ಗಟ್ಟು ಸಾರಬೇಕು ಎಂದು ಹೇಳಿದರು.

ಒಕ್ಕಲಿಗ ಮತ್ತು ಭೂಮಿ ಹಾಗೂ ರಾಸುಗಳ ನಡುವೆ ಬಿಡಿಸಲಾಗದ ಬಂಧವಿದೆ ಎಂದರು.

ಸಂಘದ ಸದಸ್ಯರಾದ ನಂಗಾರು ಅನಿತಾ ಮಾತನಾಡಿ, ಹಳ್ಳಿಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಎತ್ತು ನೋಡು, ಹಸು ನೋಡು, ನೇಗಿಲು ನೋಡು ಎನ್ನುವ ಕಾಲವೊಂದಿತ್ತು. ಆ ಕಾಲ ಬದಲಾಗುತ್ತಿದೆ. ಕುವೆಂಪು ಅವರ ಸಾಲು ನೇಗಿಲ ಮೇಲೆ ನಿಂತಿದೆ ಎನ್ನುವುದನ್ನು ನಮ್ಮ ಪೂರ್ವಿಕರು ಅಕ್ಷರಶಃ ಅನುಭವಿಸಿ ಪಾಲಿಸುತ್ತಿದ್ದರು. ಆದರೆ ಇಂದು ಬದಲಾವಣೆ ನಮ್ಮ ತನವನ್ನು ಮರೆ ಮಾಚಿದೆ ಎಂದು ಹೇಳಿದರು. ಸದಸ್ಯರಾದ ಲತಾ ಕಾಳೇರಮ್ಮ ಮಾತನಾಡಿ, ಸರ್ವಜ್ಞ ಹೇಳುವಂತೆ ಒಕ್ಕಲಿಗ ದುಡಿದು ತಾನಿಕ್ಕುವನು ಅನ್ನವನು, ಜಗದ ಜನ ನಕ್ಕು ನಲಿಸುವುದಕ್ಕೆ ಕಾರಣ ಒಕ್ಕಲಿಗನ ಅನ್ನ ಎಂಬ ವಚನದ ಸಾಲುಗಳು ಸಾರ್ವಕಾಲಿಕ. ಕೃಷಿ ಕಾಯಕ ಮಾಡುವ ಪ್ರತಿಯೊಬ್ಬರಿಗೂ ಸಂಕ್ರಾಂತಿಯ ಶುಭಾಶಯ ಕೋರಿದರು.ಈ ಸಂದರ್ಭ ಜಾನಪದ ಕೃಷಿ ಪರಿಕರಗಳು ಹಳೆ ಕಾಲದ ವಸ್ತುಗಳನ್ನು ಇರಿಸಿ ಧಾನ್ಯ ಲಕ್ಷ್ಮಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿ, ಎಳ್ಳು ಬೆಲ್ಲ ಹಂಚಿಕೊಂಡು ಸಂಭ್ರಮಿಸಲಾಯಿತು.

ಸಂಘದ ಸದಸ್ಯರಾದ ಸೂದನ ಅನಿತಾ, ಸೂದನ ಲಲಿತಾ ಪ್ರಾರ್ಥಿಸಿದರು. ಗೀತಾ ನಂಗಾರು ಸ್ವಾಗತಿಸಿದರು. ಲೀಲಾವತಿ ತುಂತಜೆ ವಂದಿಸಿದರು.

ಕ್ಯಾಪ್ಸನ್‌: ಮಕರ ಸಂಕ್ರಾಂತಿ ಹಬ್ಬ ಆಚರಣೆ ಕಾರ್ಯಕ್ರಮ ಸಂದರ್ಭ.