ಸಾರಾಂಶ
ಪರಿಶ್ರಮವೇ ವಿದ್ಯಾರ್ಥಿಗಳಿಗೆ ನಿಜವಾದ ಸಂಪತ್ತು. ಪರಾವಲಂಬಿತನ ತೊರೆದು, ಆತ್ಮ ಗೌರವದಿಂದ ಹೋರಾಡಿದಾಗ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶಿರಾ: ಪರಿಶ್ರಮವೇ ವಿದ್ಯಾರ್ಥಿಗಳಿಗೆ ನಿಜವಾದ ಸಂಪತ್ತು. ಪರಾವಲಂಬಿತನ ತೊರೆದು, ಆತ್ಮ ಗೌರವದಿಂದ ಹೋರಾಡಿದಾಗ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಸರಿಯಾಗಿ ಪೋಷಿಸಿದರೆ ಮುಂದೆ ಬಹಳ ದೊಡ್ಡ ವ್ಯಕ್ತಿಗಳಾಗಿ, ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ. ನೀವು ವ್ಯಕ್ತಿಗಳಾಗಿ ಉಳಿಯದೆ ಕ್ರಿಯಾಶೀಲ ವ್ಯಕ್ತಿಗಳಾಗಬೇಕು. ವ್ಯಕ್ತಿತ್ವದ ಸಂಸ್ಥೆಯಾಗಿ ಬೆಳೆದಾಗ ಜಗತ್ತು ನಿಮ್ಮನ್ನು ಗೌರವಿಸುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್.ಎಂ ಗೌಡ ಮಾತನಾಡಿ, ಮಕ್ಕಳು ದೇವರಿದ್ದಂತೆ. ಉಪನ್ಯಾಸಕರು ಜಾತಿ ವ್ಯವಸ್ಥೆಗೆ ಬಲಿಯಾಗದೆ, ಶ್ರದ್ಧೆಯಿಂದ ತಮ್ಮ ಸೇವೆಯನ್ನು ಮಾಡಬೇಕು. ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ಉತ್ತಮ ತರಬೇತಿ ನೀಡಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ವೈದ್ಯರು ಇಂಜಿನಿಯರ್‌ಗಳಾಗಲು ಸಾಧ್ಯವಿದೆ ಎಂದರು.ಉಪ ನಿರ್ದೇಶಕ ಡಾ.ಬಾಲ ಗುರುಮೂರ್ತಿ ಮಾತನಾಡಿ, ಹೆಣ್ಣು ಮಕ್ಕಳು ಕನಿಷ್ಠ ಪಕ್ಷ ಸ್ನಾತಕೋತ್ತರ ಪದವಿವರೆಗೆ ವ್ಯಾಸಂಗ ಮುಂದುವರಿಸಬೇಕು. ಏಕೆಂದರೆ ಮಾನಸಿಕ ವಿಕಸನದ ಜೊತೆಗೆ ಆರ್ಥಿಕವಾಗಿ ಸದೃಢವಾದರೆ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿದೆ ಎಂದರು.
ಪ್ರಾಂಶುಪಾಲ ಚಂದ್ರಯ್ಯ, ನಗರಸಭೆಯ ಅಧ್ಯಕ್ಷೆ ಪೂಜಾ ಪೆದ್ದರಾಜು, ಶಿಕ್ಷಣ ತಜ್ಞ ಪಿ.ಎಚ್.ಮಹೇಂದ್ರಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ಸದಸ್ಯರಾದ ಭಾನುಪ್ರಕಾಶ್ ಹಾಜರಿದ್ದರು.