ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಬೇಡಿ. ಕಾಂಗ್ರೆಸ್ ಪಕ್ಷದ ಆರಂಭದ ದಿನಗಳಿಂದಲೂ ಬಡವರು, ಶೋಷಿತರು ಮತ್ತು ದಲಿತರೇ ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ದಲಿತರು ಕಾಂಗ್ರೆಸ್ ಅನ್ನು ತಮ್ಮ ಸ್ವಂತ ಮನೆ ಎಂದು ಭಾವಿಸಿ ಮತ ನೀಡುತ್ತಾ ಬಂದಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿಯನ್ನು ನೇಮಕ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ದಲಿತ ಸಮುದಾಯದ ಋಣ ತೀರಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಲವಾಗಿ ಆಗ್ರಹಿಸಿದೆ.ದಸಂಸ ರಾಜ್ಯ ಸಮಿತಿಯ ಪದಾಧಿಕಾರಿಗಳು ಶನಿವಾರ ಜಂಟಿ ಸುದ್ದಿಗೋಷ್ಠಿಯ ಮೂಲಕ ಈ ಮಹತ್ವದ ಬೇಡಿಕೆಯನ್ನು ಮುಂದಿಟ್ಟರು.
ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಬೇಡಿ. ಕಾಂಗ್ರೆಸ್ ಪಕ್ಷದ ಆರಂಭದ ದಿನಗಳಿಂದಲೂ ಬಡವರು, ಶೋಷಿತರು ಮತ್ತು ದಲಿತರೇ ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ದಲಿತರು ಕಾಂಗ್ರೆಸ್ ಅನ್ನು ತಮ್ಮ ಸ್ವಂತ ಮನೆ ಎಂದು ಭಾವಿಸಿ ಮತ ನೀಡುತ್ತಾ ಬಂದಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯಕ್ಕೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಂತಹ ಉನ್ನತ ಸ್ಥಾನ ನೀಡದೆ ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.ಕೇವಲ ವೋಟ್ ಬ್ಯಾಂಕ್ ಮತ್ತು ಪಕ್ಷ ಕಟ್ಟಲು ಮಾತ್ರ ದಲಿತರನ್ನು ಬಳಸಿ, ಅಧಿಕಾರ ಅನುಭವಿಸಲು ಬಿಡುತ್ತಿಲ್ಲ ಎಂಬ ಅನುಮಾನ ಮೂಡುತ್ತಿದೆ ಎಂದು ಸಮಿತಿ ಬೇಸರ ವ್ಯಕ್ತಪಡಿಸಿದೆ.
2 ವರ್ಷಗಳ ಅವಧಿಗೆ ದಲಿತ ಸಿಎಂ ನೇಮಕಕ್ಕೆ ಆಗ್ರಹ:ಪ್ರಸ್ತುತ ಸರ್ಕಾರದ ಉಳಿದ ಎರಡು ವರ್ಷಗಳ ಅವಧಿಗಾದರೂ ದಲಿತ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ.
ಸಮುದಾಯದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ಡಾ.ಎಚ್.ಸಿ. ಮಹದೇವಪ್ಪ ಅಥವಾ ಕೆ.ಎಚ್. ಮುನಿಯಪ್ಪ ಇವರಲ್ಲಿ ಯಾರನ್ನಾದರೂ ಸಿಎಂ ಮಾಡಬೇಕು ಎಂದು ದಸಂಸ ಆಗ್ರಹಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಯೊಂದು ರಾಜಕೀಯ ಬೆಳವಣಿಗೆಯಲ್ಲೂ ಹೆಜ್ಜೆಗೆ ಹೆಜ್ಜೆಯಾಗಿ ನಿಂತಿರುವ, ಇಡೀ ದಲಿತ ಸಮುದಾಯವನ್ನು ಕೋಮು ಶಕ್ತಿಗಳ ವಿರುದ್ಧ ಸಂಘಟಿಸಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿರುವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ.
ಮಹದೇವಪ್ಪ ಅವರು ಸಿಎಂ ಆದಲ್ಲಿ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಕೆಲಸ ಮತ್ತಷ್ಟು ಮುಂದುವರೆಯಲು ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಒಂದು ವೇಳೆ ಈ ಅವಧಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ದಲಿತರನ್ನು ಮುಖ್ಯಮಂತ್ರಿ ಮಾಡದಿದ್ದರೆ, ಇಡೀ ದಲಿತ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸುವುದಲ್ಲದೆ, ಪರ್ಯಾಯ ರಾಜಕೀಯ ಆಲೋಚನೆ ಮಾಡಬೇಕಾಗುತ್ತದೆ ಎಂದು ಸಂಘಟನೆಯ ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ರಾಜ್ಯ ಸಂಘಟನಾ ಸಂಚಾಲಕ ದೇವಗಳ್ಳಿ ಸೋಮಶೇಖರ್, ವಿಭಾಗೀಯ ಸಂಚಾಲಕ ರಾಜಶೇಖರ ಕೋಟೆ, ಬೆಂಗಳೂರು ವಿಭಾಗೀಯ ಸಂಚಾಲಕರು ಒತ್ತಾಯಿಸಿದರು.