ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಯೋಜನೆ ರೂಪಿಸಿ: ಪೂಜಾರ

| Published : Sep 21 2025, 02:02 AM IST

ಸಾರಾಂಶ

ಶಿಕ್ಷಕರು 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಯೋಜನೆ ರೂಪಿಸಿ ಜಾರಿಗೆ ತರಬೇಕು.

ಪ್ರೌಢಶಾಲಾ ಮುಖ್ಯ ಗುರುಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಶಿಕ್ಷಕರು 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಯೋಜನೆ ರೂಪಿಸಿ ಜಾರಿಗೆ ತರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.

ಪಟ್ಟಣದ ಜಿಪಿಜಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ತಾಲೂಕಿನ ಪ್ರೌಢಶಾಲಾ ಮುಖ್ಯ ಗುರುಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪಠ್ಯಕ್ರಮವನ್ನು ಇಲಾಖೆಯ ನಿರ್ದೇಶನದಂತೆ ಡಿಸೆಂಬರ್ ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಬೇಕೆಂದು ಹೇಳಿದರು.

ಪ್ರಸಕ್ತ ಸಾಲಿನ ರೂಪಣಾತ್ಮಕ ಸಂಕಲನಾತ್ಮಕ ಪರೀಕ್ಷೆಗಳ ಅಂಕಗಳನ್ನು ಎಸ್ಎಟಿಎಸ್ ತಂತ್ರಾಂಶದಲ್ಲಿ ಇಂಡೀಕರಿಸಬೇಕು. ಪ್ರೌಢಶಾಲೆಗಳಲ್ಲಿ ಕುಡಿಯುವ ನೀರು ಶೌಚಾಲಯ ಸಮರ್ಪಕ ನಿರ್ವಹಣೆ ಮಾಡಬೇಕೆಂದು ಹೇಳಿದರು.

ತಾಲೂಕಿನ ಸುಮಾರು 70 ಸರ್ಕಾರಿ ಶಾಲೆಗಳ ಆಸ್ತಿಗಳನ್ನು ಮುಖ್ಯ ಗುರುಗಳ ಹೆಸರಿಗೆ ಪಹಣಿಯಲ್ಲಿ ಖಾತೆ ಬದಲಾವಣೆ ಮಾಡಿದೆ. ಉಳಿದ ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ ಮಾತನಾಡಿ, ಎಫ್ಎಲ್ಎನ್ ಶೈಕ್ಷಣಿಕ ಚಟುವಟಿಕೆ, ಸಚೇತನ ಕಾರ್ಯಕ್ರಮ, ಮಕ್ಕಳ ರಕ್ಷಣಾ ನೀತಿ, ಮಕ್ಕಳ ಸಹಾಯವಾಣಿ, ತೆರೆದ ಮನೆ ವಿಷಯಗಳ ಕುರಿತು ಮಾಹಿತಿ ನೀಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ ಮಾತನಾಡಿ, ಪೂರೈಕೆ ಆಗಿರುವ ಆಹಾರ ಧಾನ್ಯಗಳನ್ನು ಬಿಸಿಯೂಟ ತಂತ್ರಾಂಶದಲ್ಲಿ ಇಂಡೀಕರಿಸಬೇಕು. ಮೊಟ್ಟೆ ವಿತರಣೆಗೆ ಮಕ್ಕಳ ಒಪ್ಪಿಗೆ ಪತ್ರ ಪಡೆಯಲು ತಿಳಿಸಿದರು.

ತಾಲೂಕು ದೈಹಿಕ ಪರಿವೀಕ್ಷಕ ರಫಿ ಅಹಮದ್ ಖವಾಸ್ ಮಾತನಾಡಿ, ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡರು.

ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ.ಎಂ. ಕಾಂತೇಶ್, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್.ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ನಿವೃತ್ತ ಮುಖ್ಯ ಗುರುಗಳಾದ ಬಾಗಾರ ನಿಂಗಪ್ಪ, ಲಕ್ಷ್ಮಣ್ ನಾಯ್ಕ, ಕನ್ನಡ ಜಾಗೃತಿ ಜಿಲ್ಲಾ ಸಮಿತಿಗೆ ಆಯ್ಕೆಯಾದ ಸುರೇಶ ಅಂಗಡಿ ಅವರಿಗೆ ಸನ್ಮಾನಿಸಲಾಯಿತು.

ತಾಲೂಕಿನ ಸರ್ಕಾರಿ ಅನುದಾನಿತ ಅನುದಾನ ರಹಿತ ಮೊರಾರ್ಜಿ ವಸತಿ ಪ್ರೌಢಶಾಲೆಗಳ ಮುಖ್ಯ ಗುರುಗಳು ಭಾಗವಹಿಸಿದ್ದರು.