ಯೋಗ ದಿನಾಚರಣೆಗೆ ಸಕಲ ಸಿದ್ಧತೆ ಕೈಗೊಳ್ಳಿ: ಕೋಟೆಪ್ಪಗೊಳ

| Published : Jun 13 2024, 12:52 AM IST

ಸಾರಾಂಶ

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಯೋಗ ದಿನಾಚರಣೆಯ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

10 ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದಲ್ಲಿ ವ್ಯವಸ್ಥಿತವಾಗಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಯೋಗ ದಿನಾಚರಣೆಯ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.

ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ನಗರದ ಸರಕಾರಿ ಪದವಿ ಪೂರ್ವ ಕಾಲೇಜು ( ಸ್ವಪ್ನ ಗ್ರೌಂಡ್) ನಲ್ಲಿ ಏರ್ಪಡಿಸಲಾಗುವುದು. ಅಂದು ಬೆ.6.30 ರೊಳಗೆ ಎಲ್ಲರೂ ಉಪಸ್ಥಿತರಿರಬೇಕು ಎಂದು ತಿಳಿಸಿದರು.

ಯೋಗ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಅಗತ್ಯವಿರುವ ಎಲ್ಲಾ ಸಿದ್ಧತೆ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾರ್ಯಕ್ರಮವನ್ನು ಆಯೋಜಿಸಲು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ಸರ್ಕಾರೇತರ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ಯೋಗ ಸ್ಪರ್ಧೆ ಏರ್ಪಡಿಸಿ ಪ್ರತಿ ತಾಲೂಕಿಗೆ ಇಬ್ಬರು ವಿಜೇತರನ್ನು ಆಯ್ಕೆಮಾಡಿ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಶಿಷ್ಟಾಚಾರದ ಅನುಸಾರ ಆಮಂತ್ರಣ ಪತ್ರಿಕೆ ತಯಾರಿಸುವುದು, ಕಾರ್ಯಕ್ರಮ ಜರುಗುವ ಸ್ಥಳದ ಸ್ವಚ್ಚತೆ ಮತ್ತು ನೈರ್ಮಲ್ಯ ನಿರ್ವಹಣೆ, ಗಣ್ಯರಿಗೆ ಮತ್ತು ಹಿರಿಯ ನಾಗರಿಕರಿಗೆ ಆಸನದ ವ್ಯವಸ್ಥೆ, ಆಂಬುಲೆನ್ಸ್ ವಾಹನ ಸೇವೆ ಸೇರಿದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ ಸಿಪಿಒ ಗುರುನಾಥ ಗೌಡಪ್ಪನ್ನೋರ್, ಜಿಲ್ಲಾ ಆಯುಷ್ ಡಾ. ವಂದನಾ ಜೆ. ಗಾಳಿ, ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ರಮೇಶ ಸಜ್ಜನ್, ಡಾ. ಪ್ರಕಾಶ ರಾಜಾಪೂರ, ಆಡಳಿತ ಅಧಿಕಾರಿ ರವಿಕುಮಾರ, ಸಿಬ್ಬಂದಿಗಳಾದ ಆನಂದ, ಸಂಗಮೇಶ ಕೆಂಭಾವಿ, ಮಂಜುನಾಥ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ, ಪತಂಜಲಿ ಯೋಗ ಸಮಿತಿಯ ಅನಿಲ್ ಗುರೂಜಿ, ಬ್ರಹ್ಮಕುಮಾರಿ ಮುಖ್ಯಸ್ಥೆ ಕು. ವೀಣಾ, ಸ್ಕೌಟ್ಸ್ ಮತ್ತು ಗೈಡ್ಸ ಸಂಘಟಕರಾದ ಮಹ್ಮದ್ ಶರ್ಪುದ್ದೀನ್ ಇತರರಿದ್ದರು.