ತಂದೆ, ತಾಯಿಗೆ ಗೌರವ ತರುವ ಸಾಧನೆ ಮಾಡಿ: ರವಿಚಂದ್ರ

| Published : Jan 06 2025, 01:01 AM IST

ಸಾರಾಂಶ

ಬಾಳೆಹೊನ್ನೂರು, ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಗೆ ಮೋಸ ಮಾಡದೆ ಅವರಿಗೆ ಗೌರವ ತರುವ ಸಾಧನೆಗಳನ್ನು ಮಾಡಬೇಕು ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಹೇಳಿದರು.

ಕಡ್ಲೇಮಕ್ಕಿಯ ಸರ್ಕಾರಿ ಸ್ವತಂತ್ರ ಪಿಯು ಕಾಲೇಜು ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಗೆ ಮೋಸ ಮಾಡದೆ ಅವರಿಗೆ ಗೌರವ ತರುವ ಸಾಧನೆಗಳನ್ನು ಮಾಡಬೇಕು ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಹೇಳಿದರು.ಪಟ್ಟಣದ ಕಡ್ಲೇಮಕ್ಕಿಯ ಸರ್ಕಾರಿ ಸ್ವತಂತ್ರ ಪಿಯು ಕಾಲೇಜು ಶನಿವಾರ ಆಯೋಜಿಸಿದ್ದ ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕಾಲದ ಶಿಕ್ಷಣ ವ್ಯವಸ್ಥೆ ಬಹಳ ಕಷ್ಟಕರವಾಗಿದ್ದು, ಅಂದಿನ ವಿದ್ಯಾರ್ಥಿಗಳು ಹಲವು ಕಷ್ಟ, ಏಳುಬೀಳುಗಳನ್ನು ಅನುಭವಿಸಿ ಶಿಕ್ಷಣ ಪಡೆಯುತ್ತಿದ್ದರು. ಆದರೆ ಇಂದು ವಿದ್ಯಾರ್ಥಿಗಳು ಹಲವು ಸೌಲಭ್ಯ, ಮೂಲಭೂತ ಸೌಕರ್ಯಗಳು ಶಿಕ್ಷಣಕ್ಕಾಗಿ ದೊರೆಯುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುವುದು ಅವರ ತಂದೆ ತಾಯಿಗಳೇ ಆಗಿದ್ದು, ಅವರಿಗೆ ಗೌರವ ಸಿಗುವಂತೆ ನೋಡಿ ಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ದಿನಕ್ಕೆ ಕನಿಷ್ಠ ಆರು ಗಂಟೆಗಳ ಕಾಲ ಓದಿ ಜೀವನದಲ್ಲಿ ಸಾಧನೆ ಮಾಡ ಬೇಕಾಗಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಜೀವನದ ಉತ್ತಮ ಘಟ್ಟವಾದ ಪಿಯುಸಿಯಲ್ಲಿ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂದರು. ಇಂದಿನ ವಿದ್ಯಾರ್ಥಿಗಳು ಹುತಾತ್ಮ ಯೋಧ ಕರ್ನಾಟಕದ ಹನುಮಂತಪ್ಪ ಕೊಪ್ಪದ ಅವರಂತೆ ದೇಶಪ್ರೇಮ ಬೆಳೆಸಿಕೊಳ್ಳ ಬೇಕು. ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಿ. ದೇಶದ ಧೀಮಂತ ಉದ್ಯಮಿಯಾಗಿದ್ದ ರತನ್ ಟಾಟಾ ಇಂದಿನ ಯುವಜನರಿಗೆ ಆದರ್ಶಪ್ರಾಯರು. ಅಂತಹವರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಕಾಲೇಜು ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್. ಜಯಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆ ಸಂದರ್ಭದಲ್ಲಿ ಬೇರೆಲ್ಲಾ ಚಟುವಟಿಕೆಗಳನ್ನು ಬಿಟ್ಟು ಓದಿನತ್ತ ಗಮನಹರಿಸಬೇಕಿದೆ. ಸರ್ಕಾರಿ ಕಾಲೇಜಿಗೆ ಗ್ರಾಮೀಣ ಭಾಗದಿಂದಲೇ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದು, ರೈತರು, ಕೂಲಿ ಕಾರ್ಮಿಕರ ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಂದೆ ತಾಯಿಗೆ ಗೌರವ ಬರುವ ರೀತಿಯಲ್ಲಿ ವರ್ತಿಸಬೇಕು.

ವಿದ್ಯಾರ್ಥಿಗಳು ಯಾರನ್ನೋ ನಾಯಕರನ್ನಾಗಿ ಮಾಡದೇ ತಾವುಗಳೇ ನಾಯಕರಾಗಬೇಕಿದೆ. ಪ್ರತಿಯೊಬ್ಬರೂ ನಿಮ್ಮನ್ನು ಹುಡಕಿಕೊಂಡು ಬರುವಂತಹ ಸಾಧನೆ ಮಾಡಬೇಕು. ವಿದ್ಯಾರ್ಥಿಗಳನ್ನು ಕೆಲವರು ದಾರಿ ತಪ್ಪಿಸುವ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಆದರೆ ವಿದ್ಯಾರ್ಥಿಗಳು ಅದಕ್ಕೆ ಕಿವಿಗೊಡದೆ ಓದಿನತ್ತ ಗಮನಹರಿಸಬೇಕು ಎಂದರು.ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ಮಾತನಾಡಿ, ಬಾಳೆಹೊನ್ನೂರು ಸರ್ಕಾರಿ ಪಿಯು ಕಾಲೇಜು ಇಂದು ಸುಸಜ್ಜಿತವಾದ ಸೌಲಭ್ಯ ಹೊಂದಿ ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ನೀಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಹಕಾರದಿಂದ ಕಾಲೇಜಿನಲ್ಲಿ ಉತ್ತಮ ಸ್ಮಾರ್ಟ್ ಕ್ಲಾಸ್ ನಿರ್ಮಾಣಗೊಂಡಿದೆ. ಇದು ಜಿಲ್ಲೆಯಲ್ಲಿಯೇ ಅತ್ಯಂತ ಗುಣಮಟ್ಟದ ಸ್ಮಾರ್ಟ್ ಕ್ಲಾಸ್ ಎಂದರು.ಈ ಬಾರಿ ಸರ್ಕಾರದಿಂದ ₹೨.೩೦ ಲಕ್ಷ ಅನುದಾನ ಕಾಲೇಜಿಗೆ ದೊರೆತಿದ್ದು, ಇದನ್ನು ಪ್ರಯೋಗಾಲಯ, ಕ್ರೀಡಾ ವಿದ್ಯಾರ್ಥಿ ಗಳ ಪ್ರೋತ್ಸಾಹ ಹಾಗೂ ಇತರೆ ಚಟುವಟಿಕೆಗೆ ಬಳಸಲಾಗಿದೆ. ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ಕಾಲೇಜಿಗೆ ವಿವಿಧ ಸೌಲಭ್ಯ ಪಡೆಯಲಾಗಿದೆ ಎಂದರು.ಗ್ರಾಪಂ ಸದಸ್ಯೆ ಶಶಿಕಲಾ ಉಮೇಶ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಜಾಹ್ನವಿ, ಕಾರ್ಯದರ್ಶಿ ಸವಿತಾ, ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷಭಟ್, ಉಪನ್ಯಾಸಕರಾದ ಮಮತಾ, ಉಷಾ, ಮಾಲತಿ ಮತ್ತಿತರರು ಹಾಜರಿದ್ದರು.೦೪ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಉದ್ಘಾಟಿಸಿದರು. ಎಂ.ಎಸ್.ಜಯಪ್ರಕಾಶ್, ಬಿ.ಎಚ್. ಕೃಷ್ಣಮೂರ್ತಿ, ಶಶಿಕಲಾ, ಯಜ್ಞಪುರುಷಭಟ್ ಇದ್ದರು.