ಸಾರಾಂಶ
ಕಳೆದ 35 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡಿ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕುರ್ಚಿ ಖಾಲಿ ಮಾಡಿ ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಕಳೆದ 35 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡಿ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕುರ್ಚಿ ಖಾಲಿ ಮಾಡಿ ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದರು.ಅವರು ನಗರದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅರೆಬೆತ್ತಲೆ ಮೆರವಣಿಗೆ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಗೂ ತಲೆ ಬೋಳಿಸಿಕೊಂಡು ವಿಭಿನ್ನವಾಗಿ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಸುಪ್ರೀಂ ಕೋರ್ಟ್ ಪರಿಶಿಷ್ಟ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವದಕ್ಕಾಗಿ ದತ್ತಾಂಶಗಳ ಆಧಾರದ ಮೇಲೆ ಆಯಾ ರಾಜ್ಯಗಳು ಒಳಮೀಸಲಾತಿ ಜಾರಿ ಮಾಡಿ ಎಂದು ತೀರ್ಪು ನೀಡಿ ಒಂದು ವರ್ಷ ಗತಿಸಿದರೂ ವಿನಾಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರ ಕುಂಟು ನೆಪವೊಡ್ಡಿ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಖಂಡನೀಯ ಎಂದು ತಿಳಿಸಿದರು.ರಾಜ್ಯ ಸರ್ಕಾರದ ಈ ರೀತಿಯ ಅನಗತ್ಯ ವಿಳಂಬ ನೀತಿಯಿಂದ ನಮ್ಮ ಸಮುದಾಯ ಆತಂಕಕ್ಕೆ ಒಳಗಾಗಿದೆ. ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಮತ್ತು ಮಹಿಳೆಯರು ಹಾಗೂ ಒಟ್ಟಾರೆ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದರು.
ಸುಪ್ರಿಂ ತೀರ್ಪಿನ ಪ್ರಕಾರ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ತುರ್ತು ನಿಗಾ ವಹಿಸಿ ತಮ್ಮ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಿ ಅಗ್ರಪಂಕ್ತಿಯಲ್ಲಿವೆ. ಸರ್ಕಾರ ನಾಗಮೋಹನದಾಸ್ ಅವರ ಆಯೋಗಕ್ಕೆ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಮಾಹಿತಿ ಅಪೂರ್ಣವಾಗಿವೆ. ಕಾಂತರಾಜು ವರದಿ ಸರ್ಕಾರದ ನಿರ್ಲಕ್ಷದಿಂದ ಕಸದ ಬುಟ್ಟಿ ಸೇರಿದೆ. ಆಗಸ್ಟ್ 11ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಸರ್ಕಾರ ನಿರ್ಲಕ್ಷ್ಯ ತೋರಿದರೆ ಜನಾಕ್ರೋಶ ಉಗ್ರ ಸ್ವರೂಪ ತಾಳುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಹೋರಾಟಗಾರರು ಕೆಲವೊಂದು ಹಕ್ಕೋತ್ತಾಯ ಮಾಡಿದರು. ಒಳಮೀಸಲಾತಿ ಹೋರಾಟಗಾರರ ಮೇಲೆ ಹಾಕಲಾದ ರೌಡಿಶೀಟರ್ ಪ್ರಕರಣ ಹಿಂಪಡೆಯಬೇಕು. ಸುರಕ್ಷತಾ ಪರಿಕರ ಇಲ್ಲದೆ ಕಾರ್ಮಿಕ ನೌಕರರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿತ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಹಕ್ಕೊತ್ತಾಯ ಮಾಡಿದರು.
ಇದೇ ವೇಳೆ ವಿವಿಧ ಸಂಘಟನೆಗಳ ಪ್ರಮುಖರಾದ ವಿಜಯಕುಮಾರ ಹಿಪ್ಪಳಗಾಂವ್, ಪ್ರಭುರಾವ್ ತಾಳಮಡಗಿ, ಕಮಲಾಕರ ಹೆಗಡೆ, ಪರಮೇಶ್ವರ ಕಾಳಮದರಗಿ, ಡೇವಿಡ ವಾಡೆಕರ್, ಪೀಟರ್ ಶ್ರೀಮಂಡಲ, ವಿಶಾಲ ಜೋಶಿ, ಜಯಶೀಲ ಮೇತ್ರೆ, ಪೀಟರ್ ಚಿಟಗುಪ್ಪ, ಜೈಶೀಲ ಕಲವಾಡೆ, ವೀರಶೆಟ್ಟಿ ಬಂಬುಳಗಿ, ದಯಾನಂದ ರೇಕುಳಗಿ, ಯುವರಾಜ ಬೆಂಡೆ, ತುಕಾರಾಮ ಲಾಡೆ, ಯೋಹಾನ್ ಡಿಸೋಜಾ, ಜೀವನ ರಿಕ್ಕೆ ಸೇರಿದಂತೆ ವಿವಿಧ ತಾಲೂಕಾಗಳಿಂದ ಆಗಮಿಸಿದ ಸಾವಿರಾರು ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ತಲೆ ಬೋಳಿಸಿಕೊಂಡ ಯುವಕರು
ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಯತ್ನದ ಸಂದರ್ಭದಲ್ಲಿ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತಳ್ಳಿ ಒಳಗೆ ನುಗ್ಗಲು ಪ್ರಯತ್ನಿಸಿದರ ಸೂಕ್ತ ಪೊಲೀಸ್ ಬಂದೋಬಸ್ತ್ ಪ್ರತಿಭಟನಾಕಾರರು ಒಳ ನುಸುಳಲು ಬಿಡಲಿಲ್ಲ. ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ಕೆಲವು ಯುವಕರು ತಲೆ ಬೋಳಿಸಿಕೊಂಡು ಒಳಮೀಸಲಾತಿ ಜಾರಿಗಾಗಿ ಸರ್ಕಾರಕ್ಕೆ ಒತ್ತಾಯಿಸಿದರು.