ಅನ್ನದಾನ ಭವನ ಭಕ್ತರ ಉಪಯೋಗಕ್ಕೆ ಬರುವಂತೆ ಬಳಕೆ ಮಾಡಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Oct 04 2024, 01:00 AM IST

ಸಾರಾಂಶ

ದೇವಾಲಯದಲ್ಲಿ ಭಕ್ತರಿಗೆ ಮಹಾ ಮಂಗಳಾರತಿಯ ನಂತರ ಪ್ರಸಾದವಿನಿಯೋಗ ಮಾಡಲು ಯೋಜನೆ ರೂಪಿಸಬೇಕು. ಲಡ್ಡು ಪ್ರಸಾದ ಮಾರಾಟ ಕೇಂದ್ರ ಆರಂಭ, ಆದಾಯ ಹೆಚ್ಚಿಸಲು ಯೋಜನೆ ಜಾರಿಗೆ ತಂದು ದೇಗುಲದ ಉತ್ಸವಗಳು ವಿಶೇಷವಾಗಿ ನಡೆಯಲು ವ್ಯವಸ್ಥೆಯಾಗಬೇಕು. ದೇಗುಲದ ಹಣಕಾಸು ವ್ಯವಹಾರವನ್ನು ಸಂಪೂರ್ಣ ಡಿಜಿಟಲ್ ಮೂಲಕ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಅನ್ನದಾನ ಭವನವನ್ನು ನವೆಂಬರ್‌ನಲ್ಲಿ ರಾಜಮುಡಿ ಉತ್ಸವದಿಂದ ಭಕ್ತರ ಉಪಯೋಗಕ್ಕೆ ಬರುವಂತೆ ಬಳಕೆಮಾಡಿ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಮೇಲುಕೋಟೆ ದೇವಾಲಯದ ಅಭಿವೃದ್ಧಿ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಜಿಲ್ಲಾಧಿಕಾರಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಅನುಮತಿ ಪಡೆದು ಅಗತ್ಯ ಪೂರ್ವಸಿದ್ಧತೆ ಮಾಡಿಕೊಂಡು ಮೇಲುಕೋಟೆ ಪುಳಿಯೋಗರೆ ಇರುವಂತೆ ಅನ್ನದಾನ ಪ್ರಾರಂಭಿಸಿ ಎಂದರು.

ದೇವಾಲಯದಲ್ಲಿ ಭಕ್ತರಿಗೆ ಮಹಾ ಮಂಗಳಾರತಿಯ ನಂತರ ಪ್ರಸಾದವಿನಿಯೋಗ ಮಾಡಲು ಯೋಜನೆ ರೂಪಿಸಬೇಕು. ಲಡ್ಡು ಪ್ರಸಾದ ಮಾರಾಟ ಕೇಂದ್ರ ಆರಂಭ, ಆದಾಯ ಹೆಚ್ಚಿಸಲು ಯೋಜನೆ ಜಾರಿಗೆ ತಂದು ದೇಗುಲದ ಉತ್ಸವಗಳು ವಿಶೇಷವಾಗಿ ನಡೆಯಲು ವ್ಯವಸ್ಥೆಯಾಗಬೇಕು. ದೇಗುಲದ ಹಣಕಾಸು ವ್ಯವಹಾರವನ್ನು ಸಂಪೂರ್ಣ ಡಿಜಿಟಲ್ ಮೂಲಕ ಮಾಡಬೇಕು ಎಂದರು.

ಆಸ್ತಿ ಸಂರಕ್ಷಣೆ ಬಗ್ಗೆ ಗಂಭೀರವಾಗಿ ಚರ್ಚಿಸಿದ ಶಾಸಕರು, ದೇವಾಲಯದ ಕೈಪಿಡಿಯಲ್ಲಿರುವ ಜಮೀನುಗಳು ಹಾಗೂ ಸ್ಥಳಗಳು ದೇವಾಲಯದ ಹೆಸರಿಗೆ ತಕ್ಷಣ ಖಾತೆ ವರ್ಗಾವಣೆಯಾಗಬೇಕು. ಇದಕ್ಕಾಗಿ ಗ್ರಾಪಂ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿ ಕ್ರಮವಹಿಸಬೇಕು ಎಂದು ಸೂಚಿಸಿದರು.

ಪರಭಾರೆಯಾಗಿರುವ ದೇವಾಲಯದ ಆಸ್ತಿ ಮರಳಿ ಪಡೆಯಲು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲು ದೇಗುಲದ ಅಧಿಕಾರಿಗೆ ಸೂಚಿಸಿದ್ದರೂ ಯಾವುದೇ ಕ್ರಮ ವಹಿಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ನ್ಯಾಯಾಲಯದಲ್ಲಿ ತೆರವಿಗೆ ಪ್ರಕರಣ ದಾಖಲಿಸಬೇಕು ಎಂದರು.

ಸರ್ಕಾರಿ ಹಾಗೂ ದೇವಾಲಯದ ಜಾಗಗಳನ್ನು ಒತ್ತುವರಿಮಾಡಿರುವುದನ್ನು ಹತ್ತು ದಿನಗಳಕಾಲ ಇಲ್ಲೇ ಇದ್ದು ತೆರವು ಮಾಡುವ ಕಾರ್ಯ ಮಾಡುತ್ತೇನೆ. ಇದೇ ವೇಳೆ ಸರ್ಕಾರದ ಸೌಲಭ್ಯಗಳು ಮನೆ ಮನೆಗೆ ತಲುಪುವಂತೆ ಮಾಡಲಾಗುತ್ತದೆ ಎಂದರು.

ದೇಗುಲದ ನಿಧಿಗೆ ಹಣ ಜಮೆ:

ವೈರಮುಡಿ ಜಾತ್ರಾ ಮಹೋತ್ಸವ ಸಂಬಂಧ ಒಂದು ರೂಪಾಯಿಯನ್ನೂ ದೇವಾಲಯದ ನಿಧಿಯಿಂದ ಖರ್ಚು ಮಾಡಬಾರದು ಸರ್ಕಾರದಿಂದಲೇ ಅನುದಾನ ಕೊಡಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ, 31 ಲಕ್ಷ ರು. ವೆಚ್ಚ ಮಾಡಲಾಗಿದೆ ಎಂಬ ಸಂಗತಿ ಕೇಳಿಬರುತ್ತಿದೆ. ಇದು ಸಮಂಜಸ ಕ್ರಮವಲ್ಲ. ವೈರಮುಡಿ ಮಹೋತ್ಸವಕ್ಕೆ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು ಖರ್ಚಿನ ಹಣವನ್ನು ಮರಳಿ ದೇವಾಲಯದ ನಿಧಿಗೆ ಜಮೆ ಮಾಡಿಸುತ್ತೇನೆ ಎಂದರು.

ಇದೇ ವೇಳೆ ಕಾರ್ಯಕರ್ತರು ಹಲವು ದೂರು ಹಾಗೂ ಸಲಹೆ ನೀಡಿದರು. ಪ್ರಥಮ ಸ್ಥಾನೀಕ ಕರಗಂ ರಾಮಪ್ರಿಯ ಭಕ್ತರ ವಾಹನಗಳಿಗೆ ರಸ್ತೆ ಬದಲು ಪಾರ್ಕಿಂಗ್ ಸ್ಥಳ ನಿಗದಿ ಮಾಡಬೇಕು. ನೈವೇದ್ಯಗಳ ಸೇವಾಧರಗಳನ್ನು ಪರಿಷ್ಕರಿಸಬೇಕು ಎಂದು ಸಲಹೆ ನೀಡಿದರು.

ಯತೀಶ್ ಅವರು ಮೇಲುಕೋಟೆಯಲ್ಲಿ ನಡೆಯುವ ಪೋಟೋಷೂಟ್ ರಶೀತಿ ನೀಡಿಕೆಯಲ್ಲಿ ಗೋಲ್ ಮಾಲ್ ಹೆಚ್ಚಾಗಿದೆ. ಕಡಿಮೆ ಹಣ ಪಡೆದು ರಶೀತಿ ಇಲ್ಲದೆಯೇ ಪೋಟೋಷೂಟ್ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ದೇವಾಲಯಕ್ಕೆ ನಷ್ಟ ಉಂಟಾಗುತ್ತಿದೆ ಎಂದರು.

ಮೇಲುಕೋಟೆ ವಿಎಸ್ ಎಸ್ ಎಸ್ ಎನ್ ಅಧ್ಯಕ್ಷ ಯೋಗಾನರಸಿಂಹೇಗೌಡ ಪ್ರಸಾದ ತಯಾರಿಕೆಯಲ್ಲಿ ಸಹ ಅಕ್ರಮವಾಗುತ್ತಿದೆ ಇದನ್ನು ತಡೆಗಟ್ಟಬೇಕು. ರೈತಮುಖಂಡ ಟಗರು ದಿಲೀಪ್ ಕಳೆದ ವರ್ಷದಂತೆ ನವರಾತ್ರಿಗೆ ದೀಪಾಲಂಕಾರ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಎಂದು ಹೇಳಿದರು.

ರಸ್ತೆ ಪಾರ್ಕಿಂಗ್ ಬದಲಾಗಬೇಕು:

ದೇವಾಲಯದ ಬಳಿ ಭಕ್ತರು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ದೇವಾಲಯದಲ್ಲಿ ನಡೆಯುವ ಉತ್ಸವಗಳಿಗೆ ಅಡಚಣೆಯಾಗುತ್ತಿದೆ. ಈಗ ಪ್ರತಿದಿನ ನವರಾತ್ರಿ ಉತ್ಸವಗಳು ನಡೆಯುತ್ತಿದೆ. ಹೀಗಾಗಿ ಗ್ರಾ.ಪಂ ಹಾಗೂ ಪೊಲೀಸರು ತಕ್ಷಣ ಕ್ರಮವಹಿಸಿ ಭಕ್ತರವಾಹನಗಳಿಗೆ ಪ್ರಾಥಮಿಕ ಆರೋಗ್ಯಕೇಂದ್ರದ ಮುಂಭಾಗ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ಇದರಿಂದ ಸ್ವಚ್ಛತೆ ಕಾಪಾಡಲು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಿಡಿಒ ರಾಜೇಶ್ವರ್, ಇನ್ ಪೋಸಿಸ್ ವ್ಯವಸ್ಥಾಪಕಿ ಪ್ರೀತಿ ಮಹದೇವ್, ರೈತಸಂಘದ ಮುಖಂಡ ಟಗರು ದಿಲೀಪ್ , ಯೋಗೀಶ್, ಕನಗೋನಹಳ್ಳಿ ಪರಮೇಶ್‌ಗೌಡ, ಲಕ್ಷ್ಮಣ, ನಾಗಣ್ಣ, ಕಾಂಗ್ರೆಸ್ ಮುಖಂಡ ಯೋಗನರಸಿಂಹೇಗೌಡ ಇತರರು ಇದ್ದರು.