ಸಾರಾಂಶ
ಸೈಬರ್ ಪ್ರಕರಣಕ್ಕೆ ನಮ್ಮಲ್ಲಿರುವ ತಾಂತ್ರಿಕ ಅಜ್ಞಾನ ಹಾಗೂ ನಿರ್ಲಕ್ಷ್ಯತನವೂ ಕಾರಣ
ಮುಂಡರಗಿ: ಮೊಬೈಲ್ ಬಳಸುವ ಮುನ್ನ ಪಾಲಕರು ಮಕ್ಕಳಿಗೆ ಸರಿಯಾದ ಜಾಗೃತಿ ಮೂಡಿಸಬೇಕು ಎಂದು ಎಸ್‌ಬಿಐ ವ್ಯವಸ್ಥಾಪಕ ಸತೀಶ ರೆಡ್ಡಿ ಹೇಳಿದರು.
ಅವರು ಇತ್ತೀಚೆಗೆ ಪಟ್ಟಣದ ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ಅಂಬಾಭವಾನಿ ನಾಗರಿಕ ವೇದಿಕೆ ಹಾಗೂ ಎಸ್‌ಎಸ್‌ಕೆ ಸಮಾಜದ ಆಶ್ರಯದಲ್ಲಿ ಜರುಗಿದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅತಿಯಾದ ಆಸೆ, ನಿರ್ಲಕ್ಷ್ಯತನ ಹಾಗೂ ನಿರಾಸಕ್ತಿ ಅದಕ್ಕೆ ಕಾರಣ ಎಂದರು.ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಆರ್ಥಿಕ ಸಮಾಲೋಚಕ ಮತ್ತು ಅಮೂಲ್ಯ ಸಾಕ್ಷರತಾ ಕೇಂದ್ರದ ಸಂದೀಪ ಕಟ್ಟಿ ಮಾತನಾಡಿ, ಸೈಬರ್ ಪ್ರಕರಣಕ್ಕೆ ನಮ್ಮಲ್ಲಿರುವ ತಾಂತ್ರಿಕ ಅಜ್ಞಾನ ಹಾಗೂ ನಿರ್ಲಕ್ಷ್ಯತನವೂ ಕಾರಣ. ಜಾಗೃತಿಗಾಗಿ ಅನೇಕ ರೀತಿಯ ಜಾಹೀರಾತುಗಳು ಬಂದರೂ ಜನತೆ ಮೋಸ ಹೋಗುವುದು ತಪ್ಪುತ್ತಿಲ್ಲ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಸೈಬರ್ ಅಪರಾಧಗಳು ಹೇಗಾಗುತ್ತವೆ, ಅವುಗಳಿಂದ ರಕ್ಷಣೆ ಹೇಗೆ ಎಂಬ ಕುರಿತು ವಿವರಿಸಿದರು.
ವಕೀಲ ಮಂಜುನಾಥ ಅರಳಿ ಮಾತನಾಡಿ, ಸೈಬರ್ ಮೋಸಕ್ಕೆ ಒಳಗಾದವರು ಕಾನೂನು ಮೊರೆ ಹೋಗುವುದರ ಜತೆಗೆ ಗ್ರಾಹಕರ ನ್ಯಾಯ ವೇದಿಕೆ, ಪೊಲೀಸ್ ಠಾಣೆಯ ಮೂಲಕ ನ್ಯಾಯ ದೊರಕಿಸಿಕೊಳ್ಳಬೇಕು ಎಂದರು.ಸರ್ವ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರಕಾಶ ಕಾಲವಾಡ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಎಸ್‌ಕೆ ಸಮಾಜ ಅಧ್ಯಕ್ಷ ಅಶೋಕ ಸಿದ್ಲಿಂಗ್, ಪುರಸಭೆ ಸದಸ್ಯ ಮಹ್ಮದ ರಫೀಕ್ ಮುಲ್ಲಾ, ಕೆನರಾ ಬ್ಯಾಂಕ್ ಅಧಿಕಾರಿ ಗಂಗಣ್ಣ, ಡಾ. ಬಿ.ಜಿ. ಜವಳಿ, ಮಂಜುನಾಥ ಅಳವಂಡಿ, ಲಿಂಗರಾಜ ದಾವಣಗೆರೆ, ಸದಾನಂದ ಹುಬ್ಬಳ್ಳಿ, ಸಿ.ಎಸ್. ಅರಸನಾಳ ಉಪಸ್ಥಿತರಿದ್ದರು.
ಕಸಾಪ ತಾಲೂಕು ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು. ಆರ್.ಎಲ್. ಪೊಲೀಸ್‌ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಆರ್.ಕೆ. ರಾಯನಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.