ಮಕ್ಕಳಲ್ಲಿ ಸಮಾನತೆ, ಸಾಮರಸ್ಯದ ಅರಿವು ಮೂಡಿಸಿ

| Published : Feb 27 2024, 01:30 AM IST

ಸಾರಾಂಶ

ನಮ್ಮ ಪ್ರಾಚೀನ ಶಿಕ್ಷಣ ವ್ಯವಸ್ಥೆಯು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿತ್ತು, ಅದಕ್ಕಾಗಿಯೇ ನಾವು ವಿಶ್ವ ನಾಯಕರೆಂದು ಪರಿಗಣಿಸಲ್ಪಟ್ಟಿದ್ದೇವೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ, ಚಿಂತಾಮಣಿ

ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ "ವಸುಧೈವ ಕುಟುಂಬಕಂ " ತತ್ವ ಮತ್ತು ಧ್ಯಾನದ ಮೇಲೆ ಕೇಂದ್ರೀಕರಿಸುತ್ತದೆ. ವಿಶ್ವ ಸಹೋದರತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸುತ್ತದೆ. ಈ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಹೇಳಿದರು. ಚಿಂತಾಮಣಿ ತಾಲೂಕಿನ ಕುರುಬೂರಿನ ನವೋದಯ ಎಜುಕೇಶನಲ್ ಟ್ರಸ್ಟ್ ನ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ,ಅನಾದಿ ಕಾಲದಿಂದ ಅಗ್ರಸ್ಥಾನ

ಪ್ರಾಚೀನ ಕಾಲದಿಂದಲೂ ಭಾರತವು ಜ್ಞಾನ, ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದೆ. ನಮ್ಮ ಪ್ರಾಚೀನ ಶಿಕ್ಷಣ ವ್ಯವಸ್ಥೆಯು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿತ್ತು, ಅದಕ್ಕಾಗಿಯೇ ನಾವು ವಿಶ್ವ ನಾಯಕರೆಂದು ಪರಿಗಣಿಸಲ್ಪಟ್ಟಿದ್ದೇವೆ ಮತ್ತು ನಮ್ಮ ಆರ್ಥಿಕತೆಯು ಪ್ರಬಲವಾಗಿದೆ.ಆದ್ದರಿಂದ ದೇಶವನ್ನು ಚಿನ್ನದ ಹಕ್ಕಿ ಎಂದು ಕರೆಯಲಾಯಿತು ಎಂದರು.ಇಂದಿನ ಮಕ್ಕಳು ನಾಳಿನ ಭಾರತ ಮತ್ತು ಈ ದೇಶದ ಭವಿಷ್ಯದ ನಿರ್ಮಾತೃಗಳು, ಆದ್ದರಿಂದ ಅವರ ಶಿಕ್ಷಣ, ಕಲ್ಯಾಣ ಮತ್ತು ಅವರಲ್ಲಿ ನೈತಿಕ ಗುಣಗಳ ಬೆಳವಣಿಗೆಗೆ ವಿಶೇಷ ಗಮನ ನೀಡಬೇಕು. ಮಗುವಿನ ಮೊದಲ ಗುರುಗಳು ಅವರ ಪೋಷಕರು ಮತ್ತು ಕುಟುಂಬ. ಮಕ್ಕಳು ತಮ್ಮ ಕುಟುಂಬದಿಂದ ಮೊದಲ ಶಿಕ್ಷಣವನ್ನು ಪಡೆಯುತ್ತಾರೆ. ಮಕ್ಕಳು ತನ್ನ ಕುಟುಂಬದಿಂದ ಮೌಲ್ಯಗಳನ್ನು ಪಡೆಯುತ್ತಾನೆ. ಹಾಗಾಗಿ ಮಕ್ಕಳಲ್ಲಿ ಸಮಾನತೆ, ಸಹಿಷ್ಣತೆ, ಸಾಮರಸ್ಯದ ಬಗ್ಗೆ ಅರಿವು ಮೂಡಿಸಿ ಎಂದು ಕರೆ ನೀಡಿದರು.ಪರಿಸರ ಸಂರಕ್ಷಣೆ ಅದ್ಯತೆ ಇಂದು ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ದೇಶವನ್ನು ಮತ್ತಷ್ಟು ಬಲಪಡಿಸುವ ಮೂಲಕ ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಮಾಡಲು ನಿರ್ಧರಿಸಲಾಗಿದೆ. ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ, ಪರಿಸರ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ನಿಮ್ಮ ಪಾತ್ರ ಮತ್ತು ಭಾಗವಹಿಸುವಿಕೆ ಪ್ರಮುಖವಾಗಿರುತ್ತದೆ ಎಂದು ಹೇಳಿದರು.ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕ್ರೀಡೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಅದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತದೆ ಎಂದು ಸಲಹೆ ನೀಡಿದರು.ಶಂಕರೇಗೌಡರ ಸಾಧನೆ ಸ್ಮರಣೆ

ಚಿಕ್ಕಬಳ್ಳಾಪುರ ಜಿಲ್ಲೆಯ ಕುರುಬೂರು ಗ್ರಾಮದಲ್ಲಿ ಜನಿಸಿದ ಸಮಾಜ ಸೇವಕ ಹಾಗೂ ಸರಳ ವ್ಯಕ್ತಿತ್ವದ ಕೃಷಿ ತಜ್ಞ ಶಂಕರಗೌಡ ಅವರು 1987 ರಲ್ಲಿ ಗ್ರಾಮೀಣ ರೈತರು ಮತ್ತು ಕೂಲಿಕಾರರ ಮಕ್ಕಳ ಶಿಕ್ಷಣದ ಉದ್ದೇಶದಿಂದ ನವೋದಯ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯು ಅತ್ಯುತ್ತಮ ಸಂಸ್ಥೆ ಎಂದು ಪರಿಗಣಿಸಲ್ಪಟ್ಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಯು ಮಾಡುತ್ತಿರುವ ಸಾಧನೆ ಶ್ಲಾಘನೀಯ ಕೆಲಸ ಮತ್ತು ಪ್ರಯತ್ನಗಳಿಗಾಗಿ ಸಂಸ್ಥೆಯ ಕುಟುಂಬದ ಎಲ್ಲ ಸದಸ್ಯರನ್ನು ಅಭಿನಂದಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಸಿಇಓ ಪ್ರಕಾಶ್ ಜಿ ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ಎಲ್.ನಾಗೇಶ್ ಸೇರಿದಂತೆ ನವೋದಯ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕೆ. ಸಿ. ಶಂಕರ್ ಗೌಡ, ಪ್ರಾಂಶುಪಾಲರಾದ ಪುಷ್ಪ ಹಾಗೂ ಗಣ್ಯರು ಇದ್ದರು.