ಮಕ್ಕಳಿಗೆ ಸಂಸ್ಕಾರದ ಅರಿವು ಮೂಡಿಸಿ

| Published : Nov 22 2025, 02:30 AM IST

ಸಾರಾಂಶ

ಧರ್ಮದಿಂದ ನಡೆದರೆ ದೇವರು ರಕ್ಷಿಸುತ್ತಾನೆ. ಧರ್ಮ ಎಂದರೆ ಜೀವನ ನಡೆಸುವ ಒಂದು ಕ್ರಮ. ಮತ್ತೊಬ್ಬರಿಗೆ ಒಳ್ಳೆಯದು ಮಾಡಿದಾಗ ಸಿಗುವ ಸುಖ, ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ ಎಂದ ಅವರು, ಅಧ್ಯಾತ್ಮದಿಂದ ಮಾತ್ರ ಜೀವನದಲ್ಲಿ ಸುಖ, ನೆಮ್ಮದಿ ಕಾಣಲು ಸಾಧ್ಯ.

ಹುಬ್ಬಳ್ಳಿ:

ಮನೆಯಲ್ಲಿ ತಂದೆ-ತಾಯಿ ಮಕ್ಕಳಿಗೆ ಸಂಸ್ಕಾರದ ಅರಿವು ಮೂಡಿಸುವ ಜತೆಗೆ ಅಧ್ಯಾತ್ಮ ಕೇಂದ್ರಗಳಿಗೆ ಕರೆದುಕೊಂಡು ಹೋಗಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಹಾನಗರ ಪಾಲಿಕೆ ಅನುದಾನದಡಿ ಇಲ್ಲಿನ 67ನೇ ವಾರ್ಡ್​ನ ಬಮ್ಮಾಪುರ ಮತ್ತು ಬಣಗಾರ ಓಣಿಯ ಶ್ರೀವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ದೇವಸ್ಥಾನದ ಮಹಾದ್ವಾರ, ನೂತನ ವಿದ್ಯುತ್​ ಕಂಬ, ಧ್ವನಿವರ್ಧಕ ಹಾಗೂ ಎಲ್​ಇಡಿ ಬಲ್ಬ್​ಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಧರ್ಮದಿಂದ ನಡೆದರೆ ದೇವರು ರಕ್ಷಿಸುತ್ತಾನೆ. ಧರ್ಮ ಎಂದರೆ ಜೀವನ ನಡೆಸುವ ಒಂದು ಕ್ರಮ. ಮತ್ತೊಬ್ಬರಿಗೆ ಒಳ್ಳೆಯದು ಮಾಡಿದಾಗ ಸಿಗುವ ಸುಖ, ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ ಎಂದ ಅವರು, ಅಧ್ಯಾತ್ಮದಿಂದ ಮಾತ್ರ ಜೀವನದಲ್ಲಿ ಸುಖ, ನೆಮ್ಮದಿ ಕಾಣಲು ಸಾಧ್ಯ. ಇದರ ಹೊರತು ಹಣ, ಆಸ್ತಿಯಿಂದ ಅಲ್ಲ. ಇಂದು ಕೆಲವರು ಸನಾತನ ಸಂಸ್ಕೃತಿಗೆ ಅಪಮಾನ ಮಾಡುತ್ತಿದ್ದಾರೆ. ಇದು ಸರಿಯಲ್ಲ. ತಂತ್ರಜ್ಞಾನದ ಮಧ್ಯೆ ನಮ್ಮತನವನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀ, ಬಂಡಾಯ ಸಾಹಿತಿಗಳು ದೇವರು, ಧರ್ಮ, ಸ್ವಾಮೀಜಿ ಇಲ್ಲವೆಂದು ಬರೆಯುತ್ತಾರೆ. ಆದರೆ, ದೇಶದ ಬಹುಜನ ದೇವರನ್ನು ನಂಬಿದ್ದಾರೆ. ನಿತ್ಯ ಜೀವನದಲ್ಲಿ ಪೂಜಿಸುತ್ತಾರೆ. ಅದರಿಂದ ಮಾನಸಿಕ ಶಾಂತಿ ಕಂಡುಕೊಳ್ಳುತ್ತಾರೆ ಎಂದರು.

ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್‌ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಮುಖಂಡರಾದ ರಂಗಾ ಬದ್ದಿ, ರಾಜು ಕೋರ್ಯಾಣಮಠ ಸೇರಿದಂತೆ ಹಲವರಿದ್ದರು.