ಸಾರಾಂಶ
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋ ಬಿ.ಸಿ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ನಡೆದ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶವನ್ನು ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಕುಟುಂಬದಲ್ಲಿ ಪಾಲಕರು ಮಕ್ಕಳಿಗೆ ಸನಾತನ ಉನ್ನತ ಸಂಸ್ಕಾರ, ಸಂಸ್ಕೃತಿ, ಪರಂಪರೆ ಬಗ್ಗೆ ಜಾಗೃತಿ ಮೂಡಿಸಿದಲ್ಲಿ ಮಾತ್ರ ಭವಿಷ್ಯದಲ್ಲಿ ಸಮಾಜ ಸೇವೆ ಸಲ್ಲಿಸುವ ಮತ್ತು ಕುಟುಂಬವನ್ನು ಪೋಷಣೆ ಮಾಡುವ ಸಂಸ್ಕಾರವಂತ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಪ್ರತಿಪಾದಿಸಿದರು.ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಗಾಂಧೀ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿ, ಗಾಂಧೀಜಿ ಕಂಡ ವ್ಯಸನ ಮುಕ್ತ ರಾಮರಾಜ್ಯದ ಕನಸನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗಡೆ ನನಸು ಮಾಡುತ್ತಿದ್ದಾರೆ ಎಂದೂ ಸಂತಸ ವ್ಯಕ್ತಪಡಿಸಿದರು.
ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಕೋಮಲಾಚಾರ್ ಮಾತನಾಡಿ, ಕುಡಿತದಿಂದ ಕುಟುಂಬ ವ್ಯವಸ್ಥೆ ಹಾಳಾಗುತ್ತಿದೆ. ಮಕ್ಕಳು ಶಿಕ್ಷಣ ದಿಂದ ವಂಚಿತರಾಗುತ್ತಿದ್ದಾರೆ. ಇದರ ದುಷ್ಪರಿಣಾಮವನ್ನರಿತು ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿರುವ ಶ್ರೀ.ಕ್ಷೇ.ಧ.ಗ್ರಾ.ಯೋ ಹಾಗೂ ಪಾನ ಮುಕ್ತರಿಗೆ ಅಭಿನಂದನೆ ಸಲ್ಲಿಸಿದರು.ಶ್ರೀ ಕ್ಷೇ.ಧ.ಗ್ರಾ.ಯೋ. ಬಿ.ಸಿ ಟ್ರಸ್ಟ್ ಶಿರಸಿ ಜಿಲ್ಲಾ ನಿರ್ದೇಶಕ ಬಾಬುನಾಯ್ಕ ಮಾತನಾಡಿ, ಮಧ್ಯವರ್ಜನ ಶಿಬಿರದಲ್ಲಿ ಸತತ 7 ದಿನದ ವಿಶೇಷ ಮಾಹಿತಿ ನೀಡಿ ಪಾನಮುಕ್ತರನ್ನಾಗಿಸಿದ ಹೆಗ್ಗಳಿಕೆ ಹೊಂದಿದ್ದು, ಇದುವರೆಗೆ 1867 ಶಿಬಿರದ ಮೂಲಕ 1.5 ಲಕ್ಷ ಮದ್ಯವ್ಯಸನಿಗಳನ್ನು ಪಾನ ಮುಕ್ತರನ್ನಾಗಿಸಲಾಗಿದೆ ಎಂದರು.
ಇದೇ ವೇಳೆ ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಹಾಗೂ ವಿವಿಧ ರೀತಿಯ ಸಂತ್ರಸ್ಥರಿಗೆ ಪರಿಹಾರದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ [ರಿ] ಅಧ್ಯಕ್ಷ ಕಾಳಿಂಗರಾಜು ವಹಿಸಿ ಮಾತನಾಡಿದರು. ಪುರಸಭಾ ಉಪಾಧ್ಯಕ್ಷೆ ರೂಪ ಪಾರಿವಾಳದ. ಯೋಜನಾಧಿಕಾರಿ ನಂಜುಂಡಿ, ಶಾಂತಲಾ, ಶಿವಮೂರ್ತಿ, ಸುನೀತಾ ಅರವಿಂದ ಗಂಗೊಳ್ಳಿ, ಗೋವಿಂದಗೌಡ ಸಹಿತ ಶಿಕಾರಿಪುರ ಸಾಗರ ಸೊರಬ ತಾಲೂಕಿನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ತಾಲೂಕಿನ ಗ್ರಾ.ಯೋಜನಾ ಕಾರ್ಯಕರ್ತರು, ಮಧ್ಯ ಮುಕ್ತರಾದ ನವ ಜೀವನ ಸಮಿತಿಯವರು ಸಂಘದ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.