ಸಾರಾಂಶ
ಹೊನ್ನಾವರ: ಕನ್ನಡ ಭಾಷೆ, ಶಾಲೆ, ನಾಡು- ನುಡಿ ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ. ಕನ್ನಡವನ್ನು ನಮ್ಮೊಳಗೆ ಆಹ್ವಾನಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ತಿಳಿಸಿದರು.
ನ್ಯೂ ಇಂಗ್ಲಿಷ್ ಶಾಲಾ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕಗಳಿಂದ ಆಯೋಜಿಸಿದ್ದ ಹೊನ್ನಾವರ ತಾಲೂಕು ಮಟ್ಟದಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಶೇ. ೧೦೦ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅರಳುವ ಮೊಗ್ಗುಗಳಿಗೆ ಮೌಲ್ಯವನ್ನು ಸೇರಿಸುವ ಕಾರ್ಯ ಕಸಾಪ ಸಂಘಟನೆ ಮಾಡುತ್ತಿದೆ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿ ಮಾಡಿ. ಆ ಮೂಲಕ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ ಎಂದು ಪಾಲಕರಿಗೆ ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಮಾತನಾಡಿ, ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದು ಸುಲಭದ ಕೆಲಸವಲ್ಲ. ಮಾತೃಭಾಷೆಯಷ್ಟೆ ನಾಡಭಾಷೆಯನ್ನು ಪ್ರೀತಿಸಿ ಗೌರವಿಸುವ ಕಾರ್ಯವಾಗಬೇಕು. ಕನ್ನಡಕ್ಕೆ ನಾಡಿನಲ್ಲಿಯೇ ಗೌರವ ಕಡಿಮೆಯಾಗುತ್ತಿರುವುದು ವಿಷಾದನೀಯವಾಗಿದೆ. ಭಾಷಾಭಿಮಾನ ಮೂಡಿಸಿಕೊಳ್ಳೊಣ ಎಂದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ. ೧೦೦ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಾಹಿತಿ ಸುರೇಶ ನಾಯ್ಕ ಅವರು ಬರೆದ ಹೆಜ್ಜೆ ಎಂಬ 8ನೇ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಸಾಹಿತಿ ಶುಭಾ ಸಭಾಹಿತ ಹಾಗೂ ಪಿಯುಸಿಯಲ್ಲಿ ರಾಜ್ಯಮಟ್ಟದ ರ‍್ಯಾಕ್ ಪಡೆದ ಸಾನ್ವಿ ರಾವ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಕನ್ನಡ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇದನ್ನು ಆಯೋಜಿಸುತ್ತ ಬಂದಿದ್ದೇವೆ. ಕೆಲ ಪ್ರಾಂತ್ಯಗಳಲ್ಲಿ ನಮ್ಮ ಭಾಷೆಯ ಅಂತ್ಯವಾಗುತ್ತಿದೆ ಅಂದೆನಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ನಿಮ್ಮ ಎದೆಯಲ್ಲಿ ಕನ್ನಡದ ಬೀಜವನ್ನು ಬಿತ್ತುವ ಮೂಲಕ ಮುಂದಿನ ದಿನಗಳಲ್ಲಿ ಕನ್ನಡ ಹೆಚ್ಚೆಚ್ಚು ಬೆಳೆಸುವಂತಾಗಲಿ ಎನ್ನುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ಸಾಹಿತಿ ಸುರೇಶ ನಾಯ್ಕ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಟಿ. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸುಧೀಶ ನಾಯ್ಕ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಂ. ಹೆಗಡೆ, ಮುಖ್ಯಾಧ್ಯಾಪಕ ಜಯಂತ ನಾಯ್ಕ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಸ್.ಎಚ್. ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವ ಕಾರ್ಯದರ್ಶಿ ಎಚ್.ಎಂ. ಮಾರುತಿ ಸ್ವಾಗತಿಸಿದರು. ಗಜಾನನ ನಾಯ್ಕ ವಂದಿಸಿದರು. ಸುರೇಶ ನಾಯ್ಕ ನಿರ್ವಹಿಸಿದರು.