ಸಾರಾಂಶ
ಮುಂಡರಗಿ: ಕಳೆದ 15ತಿಂಗಳಿಂದ ಮುಂಡರಗಿ ಪುರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದೇ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಪಟ್ಟಣದ ಶಿರಹಟ್ಟಿ ರಸ್ತೆಯ ಸೇತುವೆ ಪಕ್ಕ ಹಾಗೂ ಹೆಸರೂರು ರಸ್ತೆ ಪಕ್ಕ ಮತ್ತು ರಾಮೇನಹಳ್ಳಿ ರಸ್ತೆಯಲ್ಲಿ ಸಾರ್ವಜನಿಕರು ತಮ್ಮ ವ್ಯಾಪಾರ ವಹಿವಾಟಿನ ಕಸ ತಂದು ಹಾಕುತ್ತಿದ್ದು, ಸ್ವಚ್ಛತಾ ವಿಭಾಗದ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು. ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅಧಿಕಾರಿಗಳಿಗೆ ಸೂಚಿಸಿದರು. ಅವರು ಬುಧವಾರ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಿವಿಧ ಬಗೆಯ ವ್ಯಾಪಾರಸ್ಥರು ತಮ್ಮ ಕಸವನ್ನು ಎಲ್ಲೆಂದರಲ್ಲಿ ತಂದು ಹಾಕುವ ಕುರಿತು ಮಾಧ್ಯಮಗಳಲ್ಲಿ ಅನೇಕ ಬಾರಿ ವರದಿಯಾಗಿದ್ದು, ಎಲ್ಲೆಲ್ಲಿ ಹೆಚ್ಚಿನ ಕಸ ಹಾಕುತ್ತಾರೆಯೋ ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಲು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಹಿರೇ ಹಳ್ಳಕ್ಕೆ ತಡೆಗೋಡಿ ಕಟ್ಟಿ ಜಾಲರಿ ಅಳವಡಿಸುವಂತೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು. ಇದಕ್ಕೆ ಸದಸ್ಯ ಕವಿತಾ ಉಳ್ಳಾಗಡ್ಡಿ ಓನ್ಯಾಗ ಸೊಳ್ಳಿ ಜಾಸ್ತಿಯಾಗಿ ಜನಾ ನಮಗೆ ಹಿಡಿ ಶಾಪಾ ಹಾಕಾಕತ್ಯಾರಾ. ಮೊದಲ ಸೊಳ್ಳಿಗೆ ಪೌಡರ್ ಹಾಕ್ಸರ್ರಿ ಎಂದರು.ಸಭೆಯಲ್ಲಿ ಅಧಿಕಾರಿಗಳು ಆಯಾ ವಾರ್ಡ್‌ನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿ ಕುರಿತು ಮಾಹಿತಿ ಓದುತ್ತಿದ್ದಾಗ ಯಾವ ಯಾವ ಕಾಮಗಾರಿ ಅಂತ ಮಾತ್ರ ಓದುತ್ತಿದ್ದೀರಿ, ಎಲ್ಲೆಲ್ಲಿ, ಯಾವ ಯಾವ ಕಾಮಗಾರಿ ಅಂತಾ ಸಭೆಗೆ ಹಾಜರಿದ್ದ ಸದಸ್ಯರಿಗೂ ಮಾಹಿತಿ ನೀಡಬೇಕು. ಅಂದಾಗ ಎಲ್ಲ ಸದಸ್ಯರಿಗೂ ಅವರವರ ವಾರ್ಡ್‌ನಲ್ಲಿ ಹಾಕಿರುವ ಕಾಮಗಾರಿಗಳ ಮಾಹಿತಿ ತಿಳಿಯುತ್ತದೆ ಎಂದು ಸದಸ್ಯ ತಿಮ್ಮಪ್ಪ ದಂಡೀನ ಒತ್ತಾಯಿಸಿದರು.
ಪಟ್ಟಣದ ಅನ್ನದಾನೀಶ್ವರ ರುದ್ರಭೂಮಿಯನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಡಿಪಿಆರ್ ತಯಾರಿಸುವ ಕುರಿತು ಚರ್ಚಿಸುವಂತೆ ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ರಿಹಾನಾಬೇಗಂ ಕೆಲೂರು, ಸಂತೋಷ ಹಿರೇಮನಿ,ರಾಜಾಭಕ್ಷಿ ಬೆಟಗೇರಿ ಪಟ್ಟಣದಲ್ಲಿ ವಿವಿಧ ಸಮುದಾಯಗಳ ರುದ್ರಭೂಮಿಗಳು ಬೇರೆ ಬೇರೆ ಇದ್ದು, ಎಲ್ಲ ಸಮುದಾಯಗಳ ಅಭಿವೃದ್ದಿಗೂ ಡಿಪಿಆರ್ ಸಿದ್ದಪಡಿಸಬೇಕು ಎಂದರು.ಇದಕ್ಕೆ ಉತ್ತರಿಸಿದ ನಾಗೇಶ ನಮ್ಮ ಪುರಸಭೆ ಸರ್ವ ಜನಾಂಗದ ಶಾಂತಿಯ ತೋಟ. ಆದ್ಯತೆ ಮೇರೆಗೆ ಎಲ್ಲ ಸಮುದಾಯಗಳ ರುದ್ರಭೂಮಿ ಅಭಿವೃದ್ದಿಗೊಳಿಸೋಣ ಎಂದರು.
8ನೇ ವಾರ್ಡ್‌ನ ಬಾಲಕಿಯರ ವಸತಿ ನಿಲಯದ ಸುತ್ತಮುತ್ತ ಚರಂಡಿಗಳು ದುರ್ವಾಸನೆ ಬೀರುವ ಮೂಲಕ ಸೊಳ್ಳೆಗಳು ಹೆಚ್ಚಾಗಿವೆ. ಈ ಕುರಿತು ಅಲ್ಲಿನ ವಿದ್ಯಾರ್ಥಿನಿಯರು ನಮ್ಮ ಮನೆಯವರೆಗೆ ಬಂದು ಹೇಳಿ ಹೋಗಿದ್ದಾರೆ. ತಕ್ಷಣವೇ ಸ್ವಚ್ಛತೆ ಮಾಡಿಸಬೇಕು. ತಾವು ಅನೇಕ ಬಾರಿ ಈ ಕುರಿತು ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯ ಶಾಂತವ್ವ ಕರಡಿಕೊಳ್ಳ ಆಕ್ರೋಶ ವ್ಯಕ್ತ ಪಡಿಸಿದರು. ತಾವು ಈ ಕೂಡಲೇ ಸ್ವಚ್ಛಗೊಳಿಸಲು ಕಳಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.ಪುರಸಭೆ ಪಕ್ಕದ ಉದ್ಯಾನವನ, ತುಂಗಭದ್ರಾ ನಗರದ ಉದ್ಯಾನವನ ಸೇರಿದಂತೆ ಪಟ್ಟಣದಲ್ಲಿರು ಎಲ್ಲ ಉದ್ಯಾನ ವನಗಳ ಅಭಿವೃದ್ಧಿಗೆ ಮುದಾಗುವಂತೆ ಕವಿತಾ ಉಳ್ಳಾಗಡ್ಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸದಸ್ಯ ಲಿಂಗರಾಜಗೌಡ ಪಾಟೀಲ ಮಾತನಾಡಿ, ಎಲ್ಲ ವಾರ್ಡ್‌ಗಳಲ್ಲಿಯೂ ಒಂದೊಂದು ಸುಂದರವಾದ ಉದ್ಯಾನವ ನಿರ್ಮಾಣ ಮಾಡಿಸಬೇಕು ಎಂದರು.ಪಟ್ಟಣದ ಕೆಜಿಎಸ್ ಶಾಲೆಯ ಹತ್ತಿರವಿರುವ ಮೂತ್ರಾಲಯ ಗಬ್ಬೆದ್ದು ನಾರುತ್ತಿದ್ದು, ಸ್ವಚ್ಛತೆ ಕುರಿತು ಅನೇಕ ಬಾರಿ ತಿಳಿಸಿದರೂ ಮಾಡುತ್ತಿಲ್ಲ ಎಂದು ಸದಸ್ಯ ಮಹ್ಮದ್ ರಫೀಕ್ ಮುಲ್ಲಾ ತಿಳಿಸಿದರು. ತಾವು ಆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಸದಸ್ಯರಾದ ಗಂಗಿಮಾಳವ್ವ ಮೋರನಾಳ, ಪ್ರಹ್ಲಾದ ಹೊಸಮನಿ, ಪವನ್ ಮೇಟಿ, ನಾಗರಾಜ ಹೊಂಬಳಗಟ್ಟಿ, ದೇವಕ್ಕ ದಂಡೀನ, ಶಿವು ಬಾರಕೇರ, ಶಿವಪ್ಪ ಚಿಕ್ಕಣ್ಣವರ, ಪ್ರಕಾಶ ಹಲವಾಗಲಿ, ರುಕ್ಮಿಣಿ ಸುಣಗಾರ, ಸುಮಾ ಬಳ್ಳಾರಿ, ರೆಹೆಮಾನಸಾಬ್ ಮಲ್ಲನಕೇರಿ ಅನೇಕರು ಉಪಸ್ಥಿತರಿದ್ದರು.