ಸಾರಾಂಶ
ಕಾರಟಗಿ: ಮಕ್ಕಳು ಸತತ ಪರಿಶ್ರಮ, ನಿರಂತರ ಅಧ್ಯಯನ ಮಾಡುವುದನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹಿರೇಮಠದ ಮರುಳಸಿದ್ದಯ್ಯ ಸ್ವಾಮಿ ಹೇಳಿದರು.ಇಲ್ಲಿನ ನ್ಯಾಶನಲ್ ಶಾಲೆ ಮತ್ತು ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ೨೭ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಕರ ಮಾರ್ಗದರ್ಶನ ಪಡೆದರೆ ಪರೀಕ್ಷೆಗಳನ್ನು ಸುಲಭದಲ್ಲಿ ಎದುರಿಸಬಹುದು. ಮಕ್ಕಳು ಮಾಹಿತಿ ಸಂಗ್ರಹ ಮತ್ತು ಅಧ್ಯಯನ ಪರಿಕರಗಳನ್ನು ಪಡೆದುಕೊಂಡು ಶಿಸ್ತು ಬದ್ಧ ಅಧ್ಯಯನದಲ್ಲಿ ತೊಡಗಿ ಶಾಲೆಗೆ, ಆ ಮೂಲಕ ನಿಮ್ಮ ತಂದೆ-ತಾಯಿಗಳು ಹೆಮ್ಮೆಪಡುವಂಥ ಸಾಧಕರಾಗಬೇಕು ಎಂದರು.ಆರ್.ಎಸ್.ಇ ಟ್ರಸ್ಟ್ ಗುಳೇದಗುಡ್ಡದ ಆಡಳಿತಾಧಿಕಾರಿ ಬಿ.ನಾರಾಯಣ ಚಿತ್ರಗಾರ ಮಾತನಾಡಿ, ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆಗೆ ಮಕ್ಕಳ ಅವಿರತ ಶ್ರಮ ಪಡಬೇಕು. ಟಿವಿ ಮತ್ತು ಮೊಬೈಲ್ ಮಕ್ಕಳ ಮನಸ್ಸನ್ನು ಅಕ್ರಮಿಸಿಕೊಂಡಿವೆ. ಅವುಗಳನ್ನು ದಾಟಿ ಯಶಸ್ಸಿಗೆ ವಿದ್ಯಾರ್ಥಿಗಳು ಶ್ರಮಿಸಬೇಕು. ಇದರಲ್ಲಿ ಪೋಷಕರ ಜವಾಬ್ದಾರಿಯೂ ಇದೆ ಎಂದರು.ಈ ಸಂದರ್ಭದಲ್ಲಿ ನ್ಯಾಶನಲ್ ಎಜ್ಯುಕೇಶನಲ್ ಆ್ಯಂಡ್ ಸೋಶಿಯಲ್ ಡೆವಲಪ್‌ಮೆಂಟ್ ಟ್ರಸ್ಟ್‌ನ ಸಂಸ್ಥಾಪಕ ಕೆ.ವೆಂಕಟರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಲಕ್ಷ್ಮೀ ಎಎಸ್‌ಐ ಲಕ್ಷ್ಮೀ, ಪುರಸಭೆ ಸದಸ್ಯ ದೊಡ್ಡಬಸಪ್ಪ ಬೂದಿ, ನಿವೃತ್ತ ಶಿಕ್ಷಕ ಅಲಿಹುಸೇನ್, ಸಿಆರ್‌ಪಿಗಳಾದ ಭೀಮಣ್ಣ ಕರಡಿ ಮತ್ತು ತಿಮ್ಮಣ್ಣ ನಾಯಕ್, ಮಂಜುನಾಥ್ ಕಾರಟಗಿ, ಕರಿಸಿದ್ದನಗೌಡ ಮಾಲಿಪಾಟೀಲ್, ಸಿದ್ದಣ್ಣ ಜವಳಗೇರಿ ಹಂಚಿನಾಳ, ಚಂದ್ರಯ್ಯಸ್ವಾಮಿ ಸೋಮನಾಳ, ಮಂಜುನಾಥ್ ಅಕ್ಕುಂಡಿ, ಅಮರೇಶ್ ದೇಸಾಯಿ, ಅಂಗಡಿ ವಿಷ್ಣುವರ್ಧನ್ ಇದ್ದರು.