ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಸಾರ್ವಜನಿಕರ ಹಾಗೂ ಅಸಂಘಟಿತ ವಲಯದ ನಾಗರೀಕರ ಆರ್ಥಿಕ ಭದ್ರತೆಗಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ‘ಎನ್‌ಪಿಎಸ್ ಸಂಚಯ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ತಿಳಿಸಿದ್ದಾರೆ.

- ಡಿಸಿ ಕಚೇರಿಯಲ್ಲಿ ಯೋಜನೆಗೆ ಚಾಲನೆ ನೀಡಿ ಅಪರ ಡಿಸಿ ಶೀಲವಂತ ಶಿವಕುಮಾರ ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಸಾರ್ವಜನಿಕರ ಹಾಗೂ ಅಸಂಘಟಿತ ವಲಯದ ನಾಗರೀಕರ ಆರ್ಥಿಕ ಭದ್ರತೆಗಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ‘ಎನ್‌ಪಿಎಸ್ ಸಂಚಯ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ‘ಎನ್‌ಪಿಎಸ್‌ ದಿವಸ್–2026’ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಎನ್‌ಪಿಎಸ್‌ ಸಂಚಯ ಯಾತ್ರೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು. ಇದು ಅಸಂಘಟಿತ ಮತ್ತು ಅನೌಪಚಾರಿಕ ವಲಯದ ನಾಗರಿಕರಿಗಾಗಿ ವಿಶೇಷವಾಗಿ ರೂಪಿಸಲಾದ ಸರಳ, ಸುರಕ್ಷಿತ ಮತ್ತು ಸುಸಂಘಟಿತ ಪಿಂಚಣಿ ಪರಿಹಾರವಾಗಿದೆ. ನಿಯಮಿತ ಉಳಿತಾಯದ ಮೂಲಕ ನಿವೃತ್ತಿ ಜೀವನಕ್ಕಾಗಿ ಉತ್ತಮ ಸಿದ್ಧತೆ ಮಾಡಿಕೊಳ್ಳಲು ಇದು ಅತ್ಯಂತ ಸಹಾಯಕವಾಗಿದೆ ಎಂದರು.

ರೈತರು, ಮಹಿಳೆಯರು, ಸಣ್ಣ ವ್ಯಾಪಾರಿಗಳು, ಅಸಂಘಟಿತ ವಲಯದ ಕಾರ್ಮಿಕರು 18 ರಿಂದ 85 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆಯು ಈ ಯೋಜನೆಯಲ್ಲಿ ಸೇರಬಹುದು. ಕೇವಲ ₹250 ಪಾವತಿಸಿ ಸುಲಭವಾಗಿ ಖಾತೆ ತೆರೆಯಬಹುದು. ಖಾತೆ ತೆರೆದ ನಂತರ ಕನಿಷ್ಠ ₹10 ಗಳಷ್ಟೂ ಕೊಡುಗೆಯನ್ನು ನಿರಂತರವಾಗಿ ನೀಡಬಹುದು. ಚಂದಾದಾರರು ಪ್ರತ್ಯೇಕವಾಗಿ ಹೂಡಿಕೆ ಆಯ್ಕೆಯನ್ನು ಆರಿಸುವ ಅಗತ್ಯವಿಲ್ಲ. ಈ ಹೂಡಿಕೆ ವಿನ್ಯಾಸವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೂಡಿಕೆದಾರರ ಮಾದರಿಯಲ್ಲೇ ಇರುತ್ತದೆ ಎಂದರು.

ಎನ್‌ಪಿಎಸ್ ಸಂಚಯಕ್ಕೆ ಸೇರಿದ 3 ವರ್ಷಗಳ ನಂತರ, ಗರಿಷ್ಠ 4 ಬಾರಿ ಸ್ವಂತ ಕೊಡುಗೆಯ ಶೇ.25ರಷ್ಟು ಹಣವನ್ನು ಭಾಗಶಃ ಹಿಂಪಡೆಯಲು ಅವಕಾಶವಿದೆ. 60 ವರ್ಷ ವಯಸ್ಸಾದಾಗ ಅಥವಾ ಖಾತೆ ತೆರೆದ 15 ವರ್ಷಗಳ ನಂತರ (ಯಾವುದು ಮೊದಲೋ ಆಗ), ಒಟ್ಟು ಸಂಚಿತ ನಿಧಿಯನ್ನು ಗಂಟು ಮೊತ್ತವಾಗಿ ಅಥವಾ ಪಿಂಚಣಿ ರೂಪದಲ್ಲಿ ಸಂಪೂರ್ಣ ಹಿಂಪಡೆಯಲು ಅನುಮತಿ ನೀಡಲಾಗುತ್ತದೆ ಎಂದು ವಿವರಿಸಿದರು.

**eNPS ** ಅಧಿಕೃತ ಪೋರ್ಟಲ್ ಮೂಲಕ ಸುಲಭವಾಗಿ ಆನ್‌ಲೈನ್‌ನಲ್ಲಿ ಖಾತೆ ತೆರೆಯಬಹುದು. ಸಮೀಪದ ಬ್ಯಾಂಕ್ ಶಾಖೆಗಳು, ಸಿಎಸ್‌ಸಿ ಕೇಂದ್ರಗಳು ಅಥವಾ ಅಧಿಕೃತ ಸೇವಾ ಪೂರೈಕೆದಾರರ ಮೂಲಕವೂ ಖಾತೆ ತೆರೆಯಲು ಅವಕಾಶವಿದೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಟೋಲ್ ಫ್ರೀ ಸಂಖ್ಯೆ 1800 110 708, ಎಸ್‌ಎಂಎಸ್ ಮೂಲಕ ** NPS Sanchay ** ಎಂದು ಟೈಪ್ ಮಾಡಿ 56677ಗೆ ಕಳುಹಿಸಿ. ಅಥವಾ ಸಾಮಾಜಿಕ ಜಾಲತಾಣಗಳಾದ ** @nps_sanchay | @PFRDAOFFICIAL | @pfrda ** ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಈ ಸಂದರ್ಭ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಸ್.ಹಿರೇಮಠ್, ಜಿಲ್ಲಾ ಕಾರ್ಮಿಕಾಧಿಕಾರಿ ಅರವಿಂದ್ ಎನ್.ಪಿ.ಎಸ್. ಸಂಚಯ್ ಸಿಬ್ಬಂದಿ ಹಾಜರಿದ್ದರು.

- - -

-3ಕೆಡಿವಿಜಿ39: ದಾವಣಗೆರೆಯಲ್ಲಿ ಶನಿವಾರ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ''''ಎನ್‌ಪಿಎಸ್‌ ಸಂಚಯ ಯಾತ್ರೆ''''ಗೆ ಚಾಲನೆ ನೀಡಿದರು.