ಕಾಂಗ್ರೆಸ್ ಇಬ್ಬಾಗವಾಗಿರುವುದ ಸಮರ್ಥವಾಗಿ ಬಳಸಿಕೊಳ್ಳಿ

| Published : Feb 12 2025, 12:30 AM IST

ಕಾಂಗ್ರೆಸ್ ಇಬ್ಬಾಗವಾಗಿರುವುದ ಸಮರ್ಥವಾಗಿ ಬಳಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ತುರುವೆಕೆರೆ ಶಾಸಕ ಟಿ.ಕೃಷ್ಣಪ್ಪ ಮಾತನಾಡಿದರು.

ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಶಾಸಕ ಟಿ.ಕೃಷ್ಣಪ್ಪ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾಂಗ್ರೆಸ್ ರಾಜ್ಯದಲ್ಲಿ ಮೂರು ಭಾಗವಾಗಿ ಹಂಚಿಹೋಗಿದ್ದು ಈ ಅವಕಾಶವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಜೆಡಿಎಸ್ ಸಂಘಟಿಸಬೇಕು ಎಂದು ತುರುವೆಕೆರೆ ಶಾಸಕ ಟಿ.ಕೃಷ್ಣಪ್ಪ ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷ ಗಟ್ಟಿಯಾಗಿ ಉಳಿಯಬೇಕಾದರೆ ಸದಸ್ಯತ್ವ ನೊಂದಣಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅನಿವಾರ್ಯ. ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳನ್ನು ಜೊತೆಯಲ್ಲಿ ಕರೆದುಕೊಂಡು ಸದಸ್ಯತ್ವ ನೊಂದಣಿಗೆ ಪ್ರತಿ ಗ್ರಾಮಗಳಿಗೆ ಹೋಗಬೇಕು. ಮುಂಬರುವ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗ ಬಯಸುವವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಟ್ಟಿಯಾಗಿ ಬೆಳೆದು ಒಂದು ವೇಳೆ ಪಕ್ಷದ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆಲ್ಲುವಷ್ಟು ಸಾಮರ್ಥ್ಯ ಇಟ್ಟುಕೊಳ್ಳಬೇಕೆಂದು ಹೇಳಿದರು.

ಸಾಮಾನ್ಯ ಕಾರ್ಯಕರ್ತರನ್ನು ಪಕ್ಷ ಗುರುತಿಸುವಂತಾಗಬೇಕು. ರಾಜ್ಯದಲ್ಲಿ ಅನೇಕ ಸಮಸ್ಯೆ, ಸವಾಲುಗಳಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರು ತತ್ತರಿಸುವಂತೆ ಮಾಡಿರುವುದರ ವಿರುದ್ಧ ಹೋರಾಡಬೇಕು. ಹೊರಗಿನಿಂದ ಇಲ್ಲಿಗೆ ಅಭ್ಯರ್ಥಿಗಳಾಗಿ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುವ ಬದಲು ಸ್ಥಳೀಯರೆ ಪಕ್ಷದಲ್ಲಿ ಗಟ್ಟಿಯಾಗಿ ನಿಂತು ಗೆಲ್ಲುವಂತಾಗಬೇಕು. ಕಾರ್ಯಕರ್ತರಲ್ಲಿಯೇ ಓಟು ಇರುವುದರಿಂದ ಪ್ರವಾಸ ಮಾಡಿ ಸಭೆಗಳನ್ನು ನಡೆಸಿ ಸದಸ್ಯತ್ವ ನೊಂದಣಿಯನ್ನು ಮಾಡಿಸಿ ಎಂದು ತಾಕೀತು ಮಾಡಿದರು.

ಕಾಂಗ್ರೆಸ್‍ನಲ್ಲಿ 3 ಭಾಗವಾಗಿದೆ. ಕಾರ್ಯಕರ್ತರು ಬೆಳೆದು ಗುರುತಿಸಿಕೊಳ್ಳಲು ಇದು ಸದವಕಾಶ. ಪಕ್ಷದಲ್ಲಿ ಗಟ್ಟಿತನವಿದ್ದಾಗ ಎಲ್ಲರೂ ಬಗ್ಗುತ್ತಾರೆ. ಕಾಂಗ್ರೆಸ್‍ನಿಂದ ಸಮಾಜ ಹಾಳಾಗುತ್ತಿದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದ್ದೆ ಎಂದರು.

ಮಾಜಿ ಶಾಸಕ ತುಮಕೂರಿನ ಎಚ್.ನಿಂಗಯ್ಯ ಮಾತನಾಡಿ, ತಾಪಂ, ಜಿಪಂ ಚುನಾವಣೆ ಬರುತ್ತಿದೆ. ಕಾರ್ಯಕರ್ತರು ಬಲಿಷ್ಠವಾದಾಗ ಪಕ್ಷಕ್ಕೆ ಬೆಲೆ ಬರುತ್ತದೆ. ಜೆಡಿಎಸ್, ಬಿಜೆಪಿ, ಮೈತ್ರಿಯಾಗಿದೆಯೆ ವಿನಃ ವಿಲೀನಗೊಂಡಿಲ್ಲ. ತಾಲೂಕು ಅಧ್ಯಕ್ಷರು, ಪ್ರಮುಖ ಕಾರ್ಯಕರ್ತರು ಸಕ್ರಿಯವಾಗಿ ಸದಸ್ಯತ್ವ ನೊಂದಣಿಯಲ್ಲಿ ತೊಡಗಿಸಿಕೊಳ್ಳಬೇಕು. ಮಹಿಳೆಯರು ಯುವಕರಿಗೆ ಆದ್ಯತೆ ನೀಡಬೇಕು. ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಯಾರು ವಿಚಲಿತರಾಗುವುದು ಬೇಡ. ಜನರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ತಳಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸಿದಾಗ ಎಲ್ಲಾ ಚುನಾವಣೆಗಳನ್ನು ಸುಲಭವಾಗಿ ಗೆಲ್ಲಬಹುದು ಎಂದು ಹೇಳಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಪಕ್ಷದ ನಾಯಕರು ಯಾರನ್ನು ಮಾತನಾಡಿಸುವುದಿಲ್ಲ. ಹೊರಗಿನಿಂದ ಬಂದವರು ಇಲ್ಲಿ ಚುನಾವಣೆಗೆ ಸ್ಪರ್ಧಿಸುವುದು ನಮಗೆ ಬೇಸರವೆನಿಸುತ್ತದೆ. ಪಕ್ಷದಲ್ಲಿ ಕೆಲವೊಂದು ಬದಲಾವಣೆಗಳಾಗಬೇಕು. ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡವರನ್ನು ಚುನಾವಣೆಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಕಾರ್ಯಕರ್ತರಲ್ಲಿ ಶಕ್ತಿ, ವಿಶ್ವಾಸ ಮೂಡಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.

ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಡಿ.ಯಶೋಧರ ಮಾತನಾಡಿ, ಸೈದ್ಧಾಂತಿಕ ತಳಹದಿ ಮೇಲೆ ಪಕ್ಷ ಕಟ್ಟಬೇಕಾಗಿರುವುದರಿಂದ ಪ್ರತಿ ಬೂತ್‍ಗಳಿಗೆ ತಾಲೂಕು ಅಧ್ಯಕ್ಷರು ಹೋಗಿ ಸದಸ್ಯತ್ವ ನೊಂದಣಿಯಲ್ಲಿ ತೊಡಗಿಕೊಳ್ಳಬೇಕು. ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕಾದರೆ ಸದಸ್ಯತ್ವ ನೊಂದಣಿಯಾಗಬೇಕು. ಪಕ್ಷ ಅಲುಗಾಡಲು ಅವಕಾಶ ಕೊಡುವುದು ಬೇಡ. ಆಂದೋಲನದ ರೀತಿಯಲ್ಲಿ ಸದಸ್ಯತ್ವ ನೊಂದಾಯಿಸಿ ಪ್ರತಿ ಮತಗಟ್ಟೆಗಳಿಗೆ ಹೋಗಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಜೆಡಿಎಸ್, ಜಿಲ್ಲಾಧ್ಯಕ್ಷ ಜಯಣ್ಣ, ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ರವೀಂದ್ರಪ್ಪ, ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್‌ ಜೋಗಿ, ವಕೀಲ ಶಿವಶಂಕರ್, ಮಂಜುನಾಥ್, ಶಂಕರಮೂರ್ತಿ, ಹನುಮಂತರಾಯ, ಸಣ್ಣ ತಿಮ್ಮಣ್ಣ, ಪರಮೇಶ್, ಗಣೇಶ್ ಇದ್ದರು.