ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಸಂವಿಧಾನವು ರಾಷ್ಟ್ರದ ಮೂಲಭೂತ ಕಾನೂನಾಗಿದ್ದು, ಪ್ರತಿಯೊಬ್ಬರಲ್ಲೂ ಸಂವಿಧಾನದ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.ಅವರು ವಿರಾಜಪೇಟೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಿರಾಜಪೇಟೆ ತಾಲೂಕು ಮೈದಾನದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ ದೇಶದ ನಾಗರಿಕರ ಜೀವನವೇ ಸಂವಿಧಾನವಾಗಿದೆ. ಪ್ರತಿಯೊಬ್ಬರು ಸಂವಿಧಾನವನ್ನು ಅರಿಯಬೇಕು, ಸಂವಿಧಾನವನ್ನು ಅರಿತರೆ ಕಾನೂನು ಉಲ್ಲಂಘನೆಯಾಗುವುದಿಲ್ಲ. ಭಾರತದಲ್ಲಿ ನಾಗರಿಕರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ. ಸರ್ಕಾರವು ಸಂವಿಧಾನದ ತತ್ವದಡಿಯಲ್ಲಿ ಸ್ಥಾಪಿತವಾಗಿದೆ ಎಂದರು.ಅಂದು ಡಾ. ಬಿ.ಆರ್. ಅಂಬೇಡ್ಕರ್ ಸಮಿತಿಯು ಒಟ್ಟು 114 ರಾಷ್ಟ್ರಗಳ ಸಂವಿಧಾನ ಅಧ್ಯಯನ ಮಾಡಿ ನಮ್ಮ ಸಂವಿಧಾನ ರಚಿಸಿತು. ಸಂವಿಧಾನದ ಪೀಠಿಕೆಯನ್ನು ಎಲ್ಲರೂ ಅರ್ಥೈಸಬೇಕಾಗಿದೆ. ರಾಷ್ಟ್ರಕ್ಕೆ ಗೌರವ ಸೂಚಿಸಿದರೆ, ಸಂವಿಧಾನವನ್ನು ಗೌರವಿಸಿದರೆ ಜೀವನಕ್ಕೆ ಸಾರ್ಥಕತೆಯಾಗುತ್ತದೆ ಎಂದು ಹೇಳಿದರು.
ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳ ತಹಸೀಲ್ದಾರ್ ರಾಮಚಂದ್ರ ಎಚ್.ಎನ್., ಗಣರಾಜ್ಯೋತ್ಸವದ ಸಂದೇಶ ನೀಡಿ, ನಮ್ಮ ರಾಷ್ಟ್ರದ ಹೆಮ್ಮೆಯ ಹಬ್ಬ ಗಣರಾಜ್ಯೋತ್ಸವ. ಭಾರತವು ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನ ನಮ್ಮ ಹೆಮ್ಮೆಯಾಗಿದೆ. ಸಂವಿಧಾನದ ಆಶಯಕ್ಕೆ ತಕ್ಕಂತೆ ಇರಬೇಕು ಮತ್ತು ಭಯೋತ್ಪಾದನೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತವನ್ನು ತಡೆಗಟ್ಟಬೇಕು ಎಂದು ತಿಳಿಸಿದರು.ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ತಹಸೀಲ್ದಾರ್ ಎಚ್.ಎನ್. ರಾಮಚಂದ್ರ ಜೊತೆಗೂಡಿ ಧ್ವಜಾರೋಹಣ ಮಾಡಿದರು.
ಈ ಸಂದರ್ಭ ಪೊಲೀಸ್ ಇಲಾಖೆ, ವಿವಿಧ ಶಾಲೆಗಳ ಎನ್.ಸಿ.ಸಿ., ಸ್ಕೌಟ್ಸ್ -ಗೈಡ್ಸ್, ಬ್ಯಾಂಡ್ ಸೆಟ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ರಾಜ್ಯಪಾಲರ ಚಿನ್ನದ ಪದಕ ವಿಜೇತೆ ಹಾಗೂ ವಕೀಲೆ ಐಮಂಗಲದ ಬೊಳ್ಳಚಂಡ ಶೃಂಗ, ಪುರಸಭೆಯ ನೀರು ಸರಬರಾಜು ನೌಕರ ಇರ್ಫಾನ್, ಸ್ವಚ್ಛತಾ ಸಹಾಯಕ ಕುಪ್ಪುಸ್ವಾಮಿ ಹಾಗೂ ಆರ್ಜಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆಯನ್ನು ಶಾಲಾ ಮಕ್ಕಳು ಹಾಡಿದರು. ವಿರಾಜಪೇಟೆ ಸಂತ ಅನ್ನಮ್ನ ಶಾಲಾ ಮಕ್ಕಳು ಪ್ರಾರ್ಥಿಸಿದರು. ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಗೀತಾಂಜಲಿ ಹಾಗೂ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.ವೇದಿಕೆಯಲ್ಲಿ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್, ಪುರಸಭಾ ಅಧಿಕಾರಿ ಚಂದ್ರಕುಮಾರ್, ಪಟ್ಟಡ ರಂಜಿ ಪೂಣಚ್ಚ ಉಪಸ್ಥಿತರಿದ್ದರು.