ಪ್ರಧಾನ ಮಂತ್ರಿ ರಿಲೀಪ್‌ ಫಂಡ್‌ ಯೋಜನೆಯಲ್ಲಿ ಕ್ಯಾನ್ಸರ್‌, ಲಿವರ್ ಸಮಸ್ಯೆ, ಅಂಗದಾನ, ಹೃದಯ ಶಸ್ತ್ರ ಚಿಕಿತ್ಸೆ ಆಗಿದ್ದರೆ ನಮ್ಮ ಕಚೇರಿಗೆ ಬಂದು ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದರೆ ಪ್ರಧಾನ ಮಂತ್ರಿ ರಿಲೀಪ್‌ ಫಂಡ್‌ ನಲ್ಲಿ ನೆರವು ಕೊಡಿಸುವುದಾಗಿ ಭರವಸೆ

ಹರಪನಹಳ್ಳಿ: ಕೇಂದ್ರ ಸರ್ಕಾರದ ಗ್ರಾಮ ಸಡಕ್‌, ಸ್ವಚ್ಛ ಭಾರತ ಮಿಷನ್ ಮುಂತಾದ ಯೋಜನೆ ಸದುಪಯೋಗ ಪಡಿಸಿಕೊಳ್ಳಿ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಅವರು ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು. ಹರಿಹರ -ಕೊಟ್ಟೂರು ರೈಲಿನಲ್ಲಿ ಶೌಚಾಲಯ ಸ್ಥಾಪನೆ, ಹರಪನಹಳ್ಳಿ ಭಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ, ಅಜ್ಮೀರ್ ರೈಲನ್ನು ಹರಪನಹಳ್ಳಿಯಲ್ಲಿ ನಿಲುಗಡೆ ಮುಂತಾದ ಕೆಲಸಗಳ ಮಂಜೂರಾತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಪಿಎಂ ರಿಲೀಪ್‌ ಫಂಡ್‌ ಗೆ ಅರ್ಜಿ ಸಲ್ಲಿಸಿ: ಪ್ರಧಾನ ಮಂತ್ರಿ ರಿಲೀಪ್‌ ಫಂಡ್‌ ಯೋಜನೆಯಲ್ಲಿ ಕ್ಯಾನ್ಸರ್‌, ಲಿವರ್ ಸಮಸ್ಯೆ, ಅಂಗದಾನ, ಹೃದಯ ಶಸ್ತ್ರ ಚಿಕಿತ್ಸೆ ಆಗಿದ್ದರೆ ನಮ್ಮ ಕಚೇರಿಗೆ ಬಂದು ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದರೆ ಪ್ರಧಾನ ಮಂತ್ರಿ ರಿಲೀಪ್‌ ಫಂಡ್‌ ನಲ್ಲಿ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.

ಈ ಯೋಜನೆಯಲ್ಲಿ ಈವರೆಗೂ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ₹2 ಕೋಟಿ ಪರಿಹಾರ ಬಂದಿದೆ, ಹರಪನಹಳ್ಳಿ ಕ್ಷೇತ್ರಕ್ಕೆ ₹12 ಲಕ್ಷ ಬಂದಿದೆ ಎಂದು ತಿಳಿಸಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ನಿವೇಶನ ರಹಿತರಿಗೆ ನೀಡಲು 9 ಸಾವಿರ ನಿವೇಶನ ಮಂಜೂರಾತಿ ನಿರೀಕ್ಷೆ ಇದೆ ಎಂದ ಅವರು, ಕುಡಿಯುವ ನೀರಿನ ತೊಂದರೆ ಇದೆ ಎಂದು ಕೆಲವರು ಫೇಕ್‌ ವಿಡಿಯೊ ವೈರಲ್‌ ಮಾಡುತ್ತಿದ್ದಾರೆ, ಕೆಲವೊಂದು ಕಡೆ ನೀರಿನ ಸಮಸ್ಯೆ ಇದ್ದಲ್ಲಿ ಖಾಸಗಿ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತದೆ, ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಸಿದ್ಧತೆ ನಡೆದಿದೆ, ಸುಳ್ಳು ಸುದ್ದಿ ಹಬ್ಬಿಸದೆ ನೀರಿನ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಕೋರಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಶಾಸಕರು ಹಾಗೂ ಸಂಸದರು ಅನುದಾನ ತರುತ್ತಾರೆ, ಆದರೆ ಅದನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕೆಂದು ಆಯಾ ಗ್ರಾಮಸ್ಥರು ತೀರ್ಮಾನಿಸಬೇಕು, ಅಧಿಕಾರ ಶಾಶ್ವತವಲ್ಲ, ಆದರೆ ಇದ್ದಾಗ ಏನು ಕೆಲಸ ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಈ ಹಿಂದೆ ಅನುದಾನ ಗುತ್ತಿಗೆದಾರರ ಹಾಗೂ ರಾಜಕಾರಣಿಗಳ ಪಾಲಾಗುತ್ತಿತ್ತು ಎಂದು ಆರೋಪಿಸಿದ ಅವರು, ಇಂದು ಸಾಕಷ್ಟು ಅಭಿವೃದ್ದಿ ಕೆಲಸ ಆಗುತ್ತಿವೆ, ಜನರಿಗೆ ಸ್ಪಂದಿಸುವವರಿಗೆ ಬಂಬಲಿಸಬೇಕು ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೆಶಕ ಬಿ.ಕೆ. ಪ್ರಕಾಶ ಮಾತನಾಡಿ, ಖನಿಜ ನಿದಿಯಲ್ಲಿ ಬೆಣ್ಣಿಹಳ್ಳಿಯಲ್ಲಿ ಇನ್ನೊಂದು ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿ ಎಂದು ಸಂಸದರಲ್ಲಿ ಕೋರಿದರು. ಚಿಗಟೇರಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಕುಬೇರಗೌಡ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಉದಯಶಂಕರ, ಪ್ರಚಾರ ಸಮಿತಿ ಅಧ್ಯಕ್ಷ ದೇವೇಂದ್ರಗೌಡ, ಪೂಜಾರ ಕೃಷ್ಣನಾಯ್ಕ, ಲಾಟಿದಾದಾಪೀರ, ಕನಕನ ಬಸ್ಸಾಪುರ ಮಂಜುನಾಥ, ಉಮಾಕಾಂತ, ಬಿಇಒ ಲೇಪಾಕ್ಷಪ್ಪ, ಸಿಆರ್‌ ಪಿ ಶಿವರಾಯಚಾರಿ ಉಪಸ್ಥಿತರಿದ್ದರು.