ಸಾವಯವ ಗೊಬ್ಬರದ ಸದುಪಯೋಗ ಪಡೆಯಲಿ: ಶಿವಾನಂದ ಹೆಬ್ಬಾರ

| Published : Jun 14 2024, 01:13 AM IST

ಸಾರಾಂಶ

ರೈತರು ಹೆಚ್ಚಾಗಿ ಸಾವಯವ ಗೊಬ್ಬರಗಳನ್ನು ಬಳಸಿ ಉತ್ತಮ ಇಳುವರಿ ಪಡೆಯಬೇಕು. ತೋಟಕ್ಕೆ ಗುಣಮಟ್ಟದ ಸಾವಯವ ಗೊಬ್ಬರ ಬಳಸಬೇಕು.

ಭಟ್ಕಳ: ತಾಲೂಕಿನ ಮಾರುಕೇರಿಯ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಕೃಷಿ ಗೊಬ್ಬರಗಳ ಪ್ರದರ್ಶನ ಮತ್ತು ಕೃಷಿ ಮಾಹಿತಿ ಕಾರ್ಯಾಗಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಿವಾನಂದ ಹೆಬ್ಬಾರ ಮಾತನಾಡಿ, ನಮ್ಮ ಭಾಗದ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಗುಣಮಟ್ಟದ ಸಾವಯವ ಗೊಬ್ಬರಗಳನ್ನು ತರಿಸಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದರು. ಸಮನತಿ ಕಂಪನಿಯ ಮಾರುಕಟ್ಟೆ ವ್ಯವಸ್ಥಾಪಕ ಗಣೇಶ ಮಾತನಾಡಿ, ರೈತರು ಹೆಚ್ಚಾಗಿ ಸಾವಯವ ಗೊಬ್ಬರಗಳನ್ನು ಬಳಸಿ ಉತ್ತಮ ಇಳುವರಿ ಪಡೆಯಬೇಕು. ತೋಟಕ್ಕೆ ಗುಣಮಟ್ಟದ ಸಾವಯವ ಗೊಬ್ಬರ ಬಳಸಬೇಕು. ಇನ್ನು ಮುಂದೆ ಮಾರುಕೇರಿ ವ್ಯವಸಾಯ ಸಂಘದಲ್ಲಿ ಗೊಬ್ಬರ ಸಿಗಲಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕೆಂದರು.

ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ರೈತರಿಗೆ ಗೊಬ್ಬರಗಳ ಬಗ್ಗೆ ಮಾಹಿತಿ ನೀಡುವುದರಿಂದ ಮತ್ತಷ್ಟು ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗಲಿದೆ. ಇಂದಿನ ದಿನಗಳಲ್ಲಿ ಕೃಷಿಕರಿಗೆ ಹೆಚ್ಚಿನ ಮಾಹಿತಿ ಅಗತ್ಯವಿದೆ ಎಂದರು.

ಮಾರುಕೇರಿ ಗ್ರಾಪಂ ಉಪಾಧ್ಯಕ್ಷ, ವ್ಯವಸಾಯ ಸಂಘದ ನಿರ್ದೇಶಕ ಎಂ.ಡಿ. ನಾಯ್ಕ ಮಾತನಾಡಿ, ಇಂತಹ ಮಾಹಿತಿ ಕಾರ್ಯಕ್ರಮದಿಂದ ರೈತರಿಗೆ ಹೆಚ್ಚು ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದರು.

ಸಂಘದ ಉಪಾಧ್ಯಕ್ಷ ಉದಯಕುಮಾರ ಶೆಟ್ಟಿ, ನಿರ್ದೇಶಕರಾದ ಶ್ರೀಕಂಠ ಹೆಬ್ಬಾರ, ರಾಘವೇಂದ್ರ ಹೆಬ್ಬಾರ ಮಾತನಾಡಿದರು. ಭಟ್ಕಳ ಓಶಿಯನ್ ರೈತ ಉತ್ಪಾದಕ ಕಂಪನಿಯ ಮುಖ್ಯಸ್ಥ ರಮೇಶ ಖಾರ್ವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.