ಸಾರಾಂಶ
ಪಾವಗಡ: ಸಣ್ಣ ರೈತರ ಪ್ರಗತಿಗೆ ರಾಜ್ಯ ಸರ್ಕಾರ ಹಲವಾರು ಯೋಜನೆ ರೂಪಿಸಿದೆ. ಗಂಗಾ ಕಲ್ಯಾಣ ಯೋಜನೆಯ ಪಂಪ್ ಮೋಟಾರ್ ಸದ್ಬಳಿಕೆಯೊಂದಿಗೆ ಪ್ರಗತಿ ಕಾಣುವಂತೆ ಭೋವಿ ಸಮಾಜದ ಕೊಳವೆಬಾವಿ ಫಲಾನುಭವಿಗಳಿಗೆ ಶಾಸಕ ಎಚ್.ವಿ.ವೆಂಕಟೇಶ್ ಕರೆ ನೀಡಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ನಿಯಮಿತ ಇವರ ವತಿಯಿಂದ ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪಂಪು, ಮೋಟಾರ್ ವಿತರಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶದ ಬಡ ರೈತರು ಹಾಗೂ ಎಸ್‌ಸಿ ಎಸ್‌ಟಿಯ ಸ್ವಾವಲಂಬನೆಯ ಬದುಕು ಹಾಗೂ ಅರ್ಥಿಕ ಪ್ರಗತಿಗಾಗಿ ಸರ್ಕಾರ ನಿಗಮದ ಮೂಲಕ ಹಲವಾರು ಯೋಜನೆ ರೂಪಿಸಿದೆ. ಯೋಜನೆಯ ಮಾಹಿತಿ ಪಡೆದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಅರ್ಹ ಬಡ ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು. 15ಮಂದಿ ಭೋವಿ ಸಮಾಜದ ಫಲಾನುಭವಿಗಳಿಗೆ ಈಗಾಗಲೇ ನಿಗಮದಿಂದ ಕೊಳವೆಬಾವಿ ಕೊರೆಸಿದ್ದು, ಇದರ ಅನ್ವಯ ಘಟಕದ ವೆಚ್ಚ ತಲಾ 3.50ಲಕ್ಷದಂತೆ ಪಂಪು ಮೋಟಾರ್ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ವಿತರಿಸಲಾಗಿದೆ. ದುರುಪಯೋಗಕ್ಕೆ ಅವಕಾಶ ನೀಡದೆ ಸದುಪಯೋಗಪಡಿಸಿಕೊಳ್ಳುವ ಮೂಲಕ ಪ್ರಗತಿ ಕಾಣುವಂತೆ ಫಲಾನುಭವಿಗಳಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, 2018-19 ನೇ ಸಾಲಿನ ರಾಜ್ಯ ಸರ್ಕಾರದಿಂದ ಗಂಗಾಕಲ್ಯಾಣ ಯೋಜನೆಯಡಿ ಆಯ್ಕೆಯಾದ 15ಮಂದಿ ಭೋವಿ ಸಮಾಜದ ಫಲಾನುಭವಿಯ ಜಮೀನುಗಳಲ್ಲಿ ಈಗಾಗಲೇ ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಸ್ಥಳೀಯ ಶಾಸಕರ ಸಹಕಾರದ ಮೇರೆಗೆ ಕೊರೆದ ಕೊಳವೆಬಾವಿಗಳಿಗೆ ಪಂಪು ಮೋಟರ್ ಹಾಗೂ ಇತರ ಪೂರಕ ಸಾಮಾಗ್ರಿಯನ್ನು ವಿತರಿಸಿದ್ದು ಸದ್ಬಳಿಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಆರ್.ಮಂಜುನಾಥ್, ತಾಲೂಕು ಅಭಿವೃದ್ಧಿ ಅಧಿಕಾರಿಯಾದ ಎಸ್.ಜಿ.ಹನುಮಂತಯ್ಯ ಹಾಗೂ ಪುರಸಭೆ ಅಧ್ಯಕ್ಷ ಪಿ.ಎಚ್.ರಾಜೇಶ್,ಪುರಸಭೆ ಸದಸ್ಯರಾದ ಸುದೇಶ್‌ಬಾಬು, ತೆಂಗಿನಕಾಯಿ ರವಿ ರಾಮಾಂಜಿನಪ್ಪ ಹಾಗೂ ಭೋವಿ ಸಮಾಜದ ಮುಖಂಡರಾದ ನಾಗೇಶ್, ವಕೀಲ ವೆಂಕಟಸ್ವಾಮಿ, ವಡ್ಡರಹಟ್ಟಿ ದಾಸಪ್ಪ, ಗುಟ್ಟಹಳ್ಳಿ ಪಾತನ್ನ ಇತರೆ ಗಣ್ಯರು ಉಪಸ್ಥಿತರಿದ್ದರು.