ಪೌತಿ ಖಾತೆ ಆಂದೋಲನ ಸದ್ಬಳಕೆ ಮಾಡಿಕೊಳ್ಳಿ

| Published : Jul 17 2025, 12:30 AM IST

ಪೌತಿ ಖಾತೆ ಆಂದೋಲನ ಸದ್ಬಳಕೆ ಮಾಡಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಂತ ಕಡಿಮೆ ದಾಖಲೆ ಮೂಲಕ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆ ವರ್ಗಾವಣೆಯಾಗಲಿದೆ.

ಶಿರಹಟ್ಟಿ: ಪೌತಿಯಾದ ಕುಟುಂಬದ ಸದಸ್ಯರಿಗೆ ಖಾತೆಯಾಗದಿರುವುದನ್ನು ಗಮನಿಸಿ ಸರ್ಕಾರವೇ ಪೌತಿ ಖಾತೆ ಆಂದೋಲನದ ಮೂಲಕ ಅನುಕೂಲ ಕಲ್ಪಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ ಕೆ.ರಾಘವೇಂದ್ರರಾವ್ ಕರೆ ನೀಡಿದರು.

ಬುಧವಾರ ತಾಲೂಕಿನ ಮಾಗಡಿ ಗ್ರಾಮದಲ್ಲಿ ಪೌತಿ/ ವಾರಸಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪೌತಿ ಆಂದೋಲನ ಪ್ರಾರಂಭವಾದ ದಿನದಿಂದ ಶಿರಹಟ್ಟಿ ತಾಲೂಕಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮೊಬೈಲ್ ಇ-ಪೌತಿ ಖಾತಾ ಆ್ಯಪ್‌ನಲ್ಲಿ ಒಟ್ಟು ೫.೩೯೬ ಪೋತಿದಾರರಿದ್ದು, ಅದರಲ್ಲಿ ಇದುವರೆಗೆ ೧.೭೨೧ ವಾರಸಾ ಖಾತೆ ಮಾಡಲಾಗಿದೆ. ೩.೬೭೫ ಅರ್ಜಿಗಳು ಬಾಕಿ ಉಳಿದಿದ್ದು, ಈ ಎಲ್ಲ ಪ್ರಕರಣಗಳನ್ನು ಶೀಘ್ರದಲ್ಲಿಯೇ ಖಾತಾ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.

ಯಾರು ಪೌತಿಯಾಗಿರುತ್ತಾರೋ ಅವರ ಹೆಸರಿನಿಂದ ತಮ್ಮ ಜಮೀನು ಕುಟುಂಬದ ಸದಸ್ಯರ ಹೆಸರಿಗೆ ಖಾತೆಯಾಗದಿದ್ದರೆ ಅಂತವರು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಮನೆಗಳ ಸಮೀಪವೇ ಬಂದು ದಾಖಲೆ ಪರಿಶೀಲಿಸಿ ಕುಟುಂಬದವರ ಹೆಸರಿಗೆ ಖಾತೆ ಮಾಡಿಕೊಡುತ್ತಾರೆ ಎಂದರು.

ಫಲಾನುಭವಿಗಳು ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಸ್ಪಂದಿಸಿ ಕೆಲಸ ಮಾಡಿಸಿಕೊಳ್ಳಬೇಕು. ಕಂದಾಯ ಇಲಾಖೆಯಲ್ಲಿ ಭೂ ದಾಖಲೆಗಳ ನಿರ್ವಹಣೆ ಸಂಬಂಧ ಸಾರ್ವಜನಿಕ ಸೇವೆ ಪಾರದರ್ಶಕವಾಗಿಡಲು ಜತೆಗೆ ಎಲ್ಲ ಕಡತಗಳ ವಿಲೇವಾರಿಯೂ ಆನ್‌ಲೈನ್ ಮೂಲಕವಾದರೆ ಕೆಲಸ ಸರಳವಾಗುವುದಲ್ಲದೇ ದಾಖಲೆಗಳು ಕಳೆದು ಹೋಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಡಿಜಿಟಲೀಕರಣ ಮಾಡುವುದರಿಂದ ರೈತರಿಗೆ ಉತ್ತಮ ಸೇವೆ ನೀಡುವುದಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಇದರಿಂದ ದಾಖಲೆಗಳ ಅವಶ್ಯಕತೆ ಇದ್ದಾಗ ಸುಲಭವಾಗಿ ಪಡೆಯಬಹುದು. ರೈತರು ಕಚೇರಿಗೆ ಅಲೆಯುವುದು ತಪ್ಪುತ್ತದೆ. ಎಲ್ಲ ದಾಖಲೆಗಳು ಗಣಕೀಕೃತವಾಗುವುದರಿಂದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿ ಹಾಗೂ ಇತರೆ ಅಧಿಕಾರಿಗಳು ದಾಖಲೆಗಳನ್ನು ಶೇಖರಿಸಲು ಅನುಕೂಲವಾಗಲೆಂದು ಅವರಿಗೆ ಕಂಪ್ಯೂಟರ್ ಕೂಡ ವಿತರಿಸಲಾಗುತ್ತಿದೆ ಎಂದರು.

ಸರ್ಕಾರ ಕಂದಾಯ ಇಲಾಖೆಯಲ್ಲಿ ಕೆಲವು ಬದಲಾವಣೆ ತರಲು ಬಜೆಟ್‌ನಲ್ಲಿ ಕೆಲವು ಕಾರ್ಯಕ್ರಮ ಘೋಷಣೆ ಮಾಡಿದ್ದು, ಅದರಂತೆ ಪೌತಿ ಆಂದೋಲನ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಭೂಮಿ ಉಸ್ತುವಾರಿ ಕೋಶ, ಕಂದಾಯ ಆಯುಕ್ತಾಲಯ ಮೊಬೈಲ್ ಮತ್ತು ವೆಬ್ ಆಧಾರಿತ ತಂತ್ರಾಂಶದ ಮೂಲಕ ಇ-ಪೌತಿ ಖಾತಾ ಆಂದೋಲನ ಆರಂಭವಾಗಿದೆ.

ಅತ್ಯಂತ ಕಡಿಮೆ ದಾಖಲೆ ಮೂಲಕ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆ ವರ್ಗಾವಣೆಯಾಗಲಿದೆ. ಮರಣ ಪ್ರಮಾಣಪತ್ರ, ವಾರಸುದಾರರ ಮೊಬೈಲ್ ನಂಬರ್ ಲಿಂಕ್ ಆಗಿರುವ ಆಧಾರ ಕಾರ್ಡ್‌, ವಂಶವೃಕ್ಷ, ಪಹಣಿ ದಾಖಲೆ ನೀಡಬೇಕು. ಎಲ್ಲ ವಾರಸುದಾರರ ಒಪ್ಪಿಗೆಯು ದಾಖಲಾಗುವುದರಿಂದ ಕಾನೂನು ಬದ್ದರಲ್ಲದ ವಾರಸುದಾರರಿಗೆ ಖಾತೆಯಾಗುವುದು ತಪ್ಪಲಿದೆ ಎಂದರು.

ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ಮುಖಂಡ ವೀರಯ್ಯ ಮಠಪತಿ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.