ಕ್ರೀಡಾ ಸೌಲಭ್ಯಗಳನ್ನ ಸದುಪಯೋಗಪಡಿಸಿಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಕ್ರೀಡಾಪಟುಗಳು ಸಾಧನೆ ಮಾಡಬೇಕು.
₹3 ಕೋಟಿ ವೆಚ್ಚದ ಈಜುಕೊಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಮುಳಗುಂದಕ್ರೀಡಾ ಸೌಲಭ್ಯಗಳನ್ನ ಸದುಪಯೋಗಪಡಿಸಿಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಕ್ರೀಡಾಪಟುಗಳು ಸಾಧನೆ ಮಾಡಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ₹3 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ ₹3 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣವಾಗಲಿದೆ. ಇಲ್ಲಿಯ ಕ್ರೀಡಾಪಟುಗಳ, ಅಭಿಮಾನಿಗಳ ಬಹುದಿನಗಳ ಬೇಡಿಕೆ ಇಂದು ಸಾಕಾರಗೊಂಡಿದೆ. ಕ್ರೀಡಾಂಗಣಕ್ಕಾಗಿ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಶಿಕ್ಷಣ ಸಮಿತಿಯು 8 ಎಕರೆ 22 ಗುಂಟೆ ಜಮೀನನ್ನು ದಾನವಾಗಿ ನೀಡಿರುವುದು ಶ್ಲಾಘನೀಯ ಎಂದರು.
ಮುಳಗುಂದವು ಕ್ರೀಡಾಪಟುಗಳ ತವರೂರು. ಹಲವಾರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿದ್ದಾರೆ. ಅವರೆಲ್ಲರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ಯುವ ಕ್ರೀಡಾಪಟುಗಳು ಭವಿಷ್ಯದಲ್ಲಿ ನಿರ್ಮಾಣವಾಗುವ ಸುಸಜ್ಜಿತ ಕ್ರೀಡಾಂಗಣ, ಒಳಾಂಗಣ ಹಾಗೂ ಈಜುಕೊಳದ ಸದುಪಯೋಗವನ್ನ ಪಡೆದುಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಊರು, ಜಿಲ್ಲೆಯ ಕೀರ್ತಿಯನ್ನ ಹೆಚ್ಚಿಸಬೇಕು ಎಂದರು.ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಬಿಎಂಎಸ್ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ, ಉಪಾಧ್ಯಕ್ಷ ವಿಜಯ ನೀಲಗುಂದ, ಜಿಪಂ ಸಿಇಒ ಮುಕುಲ್ ಜೈನ್, ಹಿರಿಯರಾದ ಶಿವಣ್ಣ ನೀಲಗುಂದ, ಬಿ.ವಿ. ಸುಂಕಾಪೂರ, ಕೃಷ್ಣಗೌಡ ಪಾಟೀಲ, ಡಾ. ಎಸ್.ಸಿ. ಚವಡಿ, ಎಸ್.ಸಿ. ಬಡ್ನಿ, ಪಿ.ಎ. ವಂಟಕರ, ಎನ್.ಆರ್. ದೇಶಪಾಂಡೆ, ಎಂ.ಎಂ. ಅದರಗುಂಚಿ, ಕೆ.ಎಲ್. ಕರೇಗೌಡ್ರ, ಎಸ್.ಸಿ. ಕುರ್ತಕೋಟಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಮೊದಲಾದವರು ಇದ್ದರು.