ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಲು ಹೊಸದಾಗಿ ನಿರ್ಮಾಣವಾಗುವ ಸರ್ಕಾರಿ ಕಟ್ಟಡಗಳ ನಕ್ಷೆ ತಯಾರಿಸುವ ಸಮಯದಲ್ಲಿ ಕಡ್ಡಾಯವಾಗಿ ರ‍್ಯಾಂಪ್ಸ್, ರೈಲಿಂಗ್ಸ್, ನಾಮಫಲಕ, ವಿಕಲಚೇತನ ಸ್ನೇಹಿ ಶೌಚಾಲಯ, ಲಿಫ್ಟ್ ಮಾರ್ಕಿಂಗ್ ಟೈಲ್ಸ್ ಅಳವಡಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು
ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಲು ಹೊಸದಾಗಿ ನಿರ್ಮಾಣವಾಗುವ ಸರ್ಕಾರಿ ಕಟ್ಟಡಗಳ ನಕ್ಷೆ ತಯಾರಿಸುವ ಸಮಯದಲ್ಲಿ ಕಡ್ಡಾಯವಾಗಿ ರ‍್ಯಾಂಪ್ಸ್, ರೈಲಿಂಗ್ಸ್, ನಾಮಫಲಕ, ವಿಕಲಚೇತನ ಸ್ನೇಹಿ ಶೌಚಾಲಯ, ಲಿಫ್ಟ್ ಮಾರ್ಕಿಂಗ್ ಟೈಲ್ಸ್ ಅಳವಡಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಉಪನಿಯಮ(72)ರಡಿ ಅಂಗವಿಕಲರ ಕುಂದು ಕೊರತೆ ಮತ್ತು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ವಿಕಲಚೇತನರ ಪಿಂಚಣಿ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ವಿವಿಧ ಇಲಾಖೆಗಳಲ್ಲಿ ಕ್ರೋಢೀಕೃತಗೊಂಡಿರುವ ವಿಕಲಚೇತನರ ಶೇ.5ರಷ್ಟು ಅನುದಾನವನ್ನು ಸಮರ್ಪಕವಾಗಿ ಹಾಗೂ ಉದ್ದೇಶಿತ ರೀತಿಯಲ್ಲಿ ಬಳಸಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರವನ್ನು ಆಗಸ್ಟ್ 15ರಂದು ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಪುನರಾರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಿ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ಬಯೋಮೆಟ್ರಿಕ್ ಸಮಸ್ಯೆಯಿಂದ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗದ ವಿಕಲಚೇತನರಿಗೆ ವಿಶೇಷ ಶಿಬಿರವನ್ನು ಆಯೋಜಿಸಿ, ಆಧಾರ್ ನೋಂದಣಿ ಹಾಗೂ ಸೀಡಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿಕಲಚೇತನರ ಹಕ್ಕುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ವಿಕಲಚೇತನರ ಕಲ್ಯಾಣ ಮತ್ತು ಪುನರ್ವಸತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಬಿ.ಎಸ್. ಚಿದಾನಂದಮೂರ್ತಿ ಮಾತನಾಡಿ, ವಿಕಲಚೇತನರಿಗೆ ಇಲಾಖೆಯಿಂದ ಒದಗಿಸುವ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ, ಯಂತ್ರಚಾಲಿತ ದ್ವಿಚಕ್ರ ವಾಹನ ಮತ್ತು ಬ್ಯಾಟರಿ ಚಾಲಿತ ವ್ಹೀಲ್ ಛೇರ್, ಟಾಕಿಂಗ್ ಲ್ಯಾಪ್‌ಟಾಪ್ ಮತ್ತು ಹೊಲಿಗೆ ಯಂತ್ರ, ಸಾಧನ ಸಲಕರಣೆ, ವಿಕಲಚೇತನರ ಗ್ರಾಮೀಣ ಪುನರ್ವಸತಿ, ಆಧಾರ್ ಯೋಜನೆ, ಆರೈಕೆದಾರರ ಪ್ರೋತ್ಸಾಹಧನ, ವಿವಾಹ ಪ್ರೋತ್ಸಾಹಧನ, ಶುಲ್ಕ ಮರುಪಾವತಿ, ಶಿಶುಪಾಲನಾ ಭತ್ಯೆ, ನಿರಾಮಯ, ವಿಕಲಚೇತನರ ಸಹಾಯವಾಣಿ ಕೇಂದ್ರ, ವಿಶೇಷ ಶಾಲೆಗಳು, ವಸತಿನಿಲಯಗಳ ಕುರಿತು ಸಭೆಗೆ ಸಮಗ್ರ ಮಾಹಿತಿ ನೀಡಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲೋಕೇಶ್ ಧನಪಾಲ ಹವಲೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.