ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಮಕ್ಕಳ ಸಾಹಿತ್ಯವು ಸಮಾಜದ ಉತ್ಕೃಷ್ಟತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂಲಭೂತ ಸಾಕ್ಷರತೆಯಿಂದ ಸಾಂಸ್ಕೃತಿಕ ಸಾಕ್ಷರತೆ ಮತ್ತು ವಿಮರ್ಶಾತ್ಮಕ ವಿಚಾರಗಳು ಪ್ರತಿಯೊಂದು ಮಗುವಿನ ಮನದಲ್ಲಿ ಮೂಡಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ತಿಳಿಸಿದರು.ತಾಲೂಕಿನ ಚಿಕ್ಕಬಾಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ ಹಾವೇರಿ, ತಾಪಂ ಬ್ಯಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಭಾರತ ಜ್ಞಾನ ವಿಜ್ಞಾನ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಮಕ್ಕಳ ಸಾಹಿತ್ಯ ಸಂಭ್ರಮ 2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿ ಮಕ್ಕಳ ಕಲಾತ್ಮಕ ಹಾಗೂ ಕೌಶಲ್ಯ ಗುರುತಿಸಿ, ಸುಪ್ತವಾಗಿರುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆರೋಗ್ಯಕರ ಆಲೋಚನೆಗಳು ಮತ್ತು ಶಿಸ್ತಿನ ನಡವಳಿಕೆಯೊಂದಿಗೆ ಯುವ ಮನಸ್ಸುಗಳನ್ನು ಪೋಷಿಸುವ ಅವಶ್ಯಕತೆಯಿದೆ ಎಂದರು.ಮಕ್ಕಳ ಸಾಹಿತ್ಯ ಸರಿ ಮತ್ತು ತಪ್ಪು ಕುರಿತು ಚರ್ಚಿಸುವ ಬದಲಾಗಿ ನೈತಿಕ, ಕ್ರಿಯಾಶೀಲತೆಯ ಪರಿಕಲ್ಪನೆ ಹಾಗೂ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಲು ಅನುಭವ ನೀಡುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಸಲುವಾಗಿ ವಿಶೇಷ ಶಿಕ್ಷಕರನ್ನು ನಿಯೋಜಿಸುವ ಮೂಲಕ ಅವರಲ್ಲಿರುವ ವಿವಿಧ ಕೌಶಲ್ಯ ಹಾಗೂ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕಾಗಿದೆ ಎಂದರು.
ಜಿಲ್ಲಾ ಡಯಟ್ ನಿರ್ದೇಶಕ ಗಿರೀಶ ಪದಕಿ ಮಾತನಾಡಿ, ಫೆ.19ರಿಂದ ಮೂರು ದಿನಗಳ ಕಾಲ ಜರುಗುತ್ತಿರುವ ಮಕ್ಕಳ ಸಾಹಿತ್ಯ ಕಾರ್ಯಕ್ರಮದಲ್ಲಿ ಸೂಡಂಬಿ, ಚಿಕ್ಕಬಾಸೂರು, ಹಿರೇಹಳ್ಳಿ ಗ್ರಾಮಗಳ ಪ್ರಾಥಮಿಕ ಶಾಲೆಯ 100 ಮಕ್ಕಳು ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ 25 ಜನ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸುವ ಮೂಲಕ ಮಕ್ಕಳ ಬೌದ್ದಿಕ ಪರೀಕ್ಷೆ ಆಯೋಜಿಸಿದೆ, ಕಥೆ, ನಾಟಕ, ಹಾಡುಹಕ್ಕಿ, ಸಂದರ್ಶನ ಎಂಬ 4 ವಿಭಾಗಗಳಲ್ಲಿ ಮಕ್ಕಳು ಸ್ಪರ್ಧೆ ನಡೆಯುತ್ತಿದೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಮಕ್ಕಳು ತಪ್ಪುದಾರಿಗಿಳಿಯುವ ಮುನ್ನ ಪಾಲಕರು ಎಚ್ಚರ ವಹಿಸಬೇಕು. ಮೊಬೈಲ್‌ನಿಂದ ದೂರವಿರುವಂತೆ ನೋಡಿಕೊಳ್ಳಬೇಕು, ಪುಸ್ತಕ ಓದುವುದು, ಸಾಹಿತ್ಯದ ಅಭಿರುಚಿ ರೂಢಿಸಿಕೊಂಡು ಗ್ರಂಥಾಲಯದ ಕಡೆಗೆ ತೆರಳುವಂತೆ ನಾವು ಶಿಕ್ಷಣ ನೀಡಬೇಕಿದೆ. ಮಕ್ಕಳ ಪ್ರಗತಿ ಮನೆಯಲ್ಲಿನ ಚಟುವಟಿಕೆ ಇತ್ಯಾದಿಗಳ ಕುರಿತು ಜಾಗೃತರಾಗಬೇಕಿದೆ. ಮಕ್ಕಳ ಸಾಹಿತ್ಯ ಕಾರ್ಯಕ್ರಮದಲ್ಲಿ ಇಂತಹವರನ್ನು ಗುರುತಿಸಿ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಚಿಕ್ಕಬಾಸೂರು ಗ್ರಾಪಂ ಅಧ್ಯಕ್ಷೆ ಲಲಿತಾ ವಾಲ್ಮೀಕಿ, ಸೂಡಂಬಿ ಗ್ರಾಪಂ ಅಧ್ಯಕ್ಷೆ ಹಮೀಜಾಬಾನು ಮುಲ್ಲಾನವರ, ಹಿರೇಹಳ್ಳಿ ಗ್ರಾಪಂ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ತಹಸೀಲ್ದಾರ ಫಿರೋಜ್‌ಷಾ ಸೋಮನಕಟ್ಟಿ, ಬಿಇಒ ಎಸ್.ಜಿ. ಕೋಟಿ, ಅಕ್ಷರ ದಾಸೋಹಾಧಿಕಾರಿ ಎನ್. ತಿಮ್ಮಾರೆಡ್ಡಿ, ಭಾರತ ವಿಜ್ಚಾನ ಸಮಿತಿ ಅಧ್ಯಕ್ಷ ಜಮೀರ ರಿತ್ತಿ, ಸಾಹಿತಿ ಜೀವರಾಜ ಛತ್ರದ, ವಿಷಯ ಪರಿವೀಕ್ಷಕ ಗುರುಪ್ರಸಾದ್, ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹದೇವ ಕರಿಯಣ್ಣನವರ, ಅಶೋಕ ಮೂಡಿ, ಚಂದ್ರು ಮೂಲಂಗಿ ಮುಖ್ಯ ಶಿಕ್ಷಕ ಎಸ್.ಎಸ್. ಅಜಗೊಂಡ್ರ ಇದ್ದರು.