ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಜನರ ಬದುಕಿನ ಪ್ರಶ್ನೆಗಳ ಬಗ್ಗೆ ಮಾತನಾಡದ ಸರ್ಕಾರ ಜನರ ನಡುವೆ ವಿಷಕಾರಿ ರಾಜಕೀಯವನ್ನು ನಡೆಸುತ್ತ ಬಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಕಿಡಿಕಾರಿದರು. ಪಟ್ಟಣದ ಕಡೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಹತ್ತಿರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ರಾಜ್ಯ ರೈತ ಸಂಘ, ಪ್ರಾಂತೀಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮುಷ್ಕರದಲ್ಲಿ ಅವರು ಮಾತನಾಡಿದರು.ಕೇಂದ್ರ ಸರ್ಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿಯುತ್ತಾ ಶ್ರಮ ಜೀವಿಗಳ ಜೀವನೋಪಾಯದ ಮೇಲೆ ಕ್ರೂರ ದಾಳಿಯನ್ನು ಮಾಡುತ್ತಿದೆ. ಕಾರ್ಪೊರೇಟ್ ಕಂಪನಿಗಳಿಗೆ ನೆರವಾಗುವ ನೀತಿಯನ್ನು ರೂಪಿಸುತ್ತಾ ಬಂದಿದೆ ಎಂದರು. ಪ್ರಾಂತ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಜ್ಜಪ್ಪ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ದುಡಿಯುವ ವರ್ಗಕ್ಕೆ ಸರಿಯಾದ ರೀತಿಯಲ್ಲಿ ಸಂಭಾವನ ನೀಡದೆ, ದುಡಿಯುವ ವರ್ಗ ಬೀದಿಗೆ ಬರುವಂತೆ ಮಾಡುತ್ತಿದೆ. ಮತ ಪಡೆದ ರಾಜಕೀಯ ವ್ಯಕ್ತಿಗಳು ದುಡಿಯುವ ಕಾರ್ಮಿಕರ ಬಗ್ಗೆ ಒಂದಿಷ್ಟು ಮಾತನಾಡದೆ ಇರುವುದು ಸರಿಯಲ್ಲ. ಕೇಂದ್ರ ಸರ್ಕಾರ ಮಾಡಿರುವ ರೈತ ವಿರೋಧಿ ಕಾನೂನು ವಾಪಸ್ ತೆಗೆದುಕೊಂಡು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಸರ್ಕಾರಕ್ಕೆ ರೈತರಿಂದ ದುಡಿಮೆ ಮಾಡುವ ಕಾರ್ಮಿಕರಿಂದ ಹೆಚ್ಚು ತೆರಿಗೆ ಮೂಲಕ ಆದಾಯ ಬರುತ್ತಿದೆ. ಆದರೆ ಇವರನ್ನೇ ಸರ್ಕಾರ ಕಡೆಗಾಣಿಸಿದೆ. ಬಡವರ ಪರವಾಗಿ ಕೆಲಸ ಮಾಡುವ ಸರ್ಕಾರವಿಲ್ಲ, ಸರ್ಕಾರಕ್ಕೆ ಗೌರವ ಇದ್ದರೆ ಬಡವರು ಹಾಗೂ ರೈತರನ್ನು ಗೌರವಿಸಬೇಕು ಎಂದರು.ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ದ ಅಧ್ಯಕ್ಷ ಎಚ್.ವಿ.ಅನುಸೂಯ ಮಾತನಾಡಿ, ಅಂಗನವಾಡಿ ನೌಕರರು ಐವತ್ತು ವರ್ಷಗಳಿಂದ ಐಸಿಡಿಎಸ್ ಯೋಜನೆ ಅಡಿ ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕಾಯಂ ಮಾಡಬೇಕು. ಕಾಯಂ ಮಾಡುವ ತನಕ ಕನಿಷ್ಠ ವೇತನ ನೀಡಬೇಕು. ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗಳು ನಿರಂತರವಾಗಿ ಕೇಳಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸರೋಜ, ಖಜಾಂಚಿ ಟಿ.ಆರ್ ವಿರೂಪಾಕ್ಷಮ್ಮ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಕಾರ್ಯದರ್ಶಿ ಸಿಜಿ ಲೋಕೇಶ್, ಸತ್ತಿಗಪ್ಪ, ರೈತ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತಿತರರು ಭಾಗವಹಿಸಿದ್ದರು.